ರಸ್ತೆ ಅಭಿವೃದ್ಧಿಯಾದರೆ ಬಸ್ ಸೌಲಭ್ಯ: ಸಚಿವ ಶಿವಾನಂದ
ನಂದಿಯಾಳ ಪಿ.ಯು.: ರಸ್ತೆ ಅಭಿವೃದ್ಧಿ, ಶಾಲಾ ಕೋಣೆಗಳ ನಿರ್ಮಾಣಕ್ಕೆ ಭೂಮಿಪೂಜೆ
ಬಸವನಬಾಗೇವಾಡಿ : ಒತ್ತುವರಿ ಮಾಡಿಕೊಳ್ಳದೇ ರಸ್ತೆ ಅಭಿವೃದ್ಧಿಗೆ ಸಹಕಿರಿಸಿದರೆ ಸಾರಿಗೆ ಸಂಸ್ಥೆಯ ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ, ಶೈಕ್ಷಣಿಕ ಅಭಿವೃದ್ಧಿಗೂ ಆದ್ಯತೆ ನೀಡುವುದಾಗಿ ಘೋಷಿಸಿದರು.
ಭಾನುವಾರ ತಮ್ಮ ತವರು ಕ್ಷೇತ್ರವಾದ ಬಸವವನಬಾಗೇವಾಡಿ ವ್ಯಾಪ್ತಿಯ ನಂದಿಹಾಳ ಪಿ.ಯು. ಗ್ರಾಮದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಹಾಗೂ ಶಾಲಾ ನೂತನ ಕೋಣೆಗಳ ನಿಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ನಂದಿಹಾಳ ಪಿ.ಯು. ಗ್ರಾಮದಿಂದ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ವಿವಿಧ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಹೀಗಾಗಿ ಗ್ರಾಮಸ್ಥರು ನಿರ್ಮಾಣವಾಗುವ ರಸ್ತೆ ಒತ್ತುವರಿ ಮಾಡಿಕೊಳ್ಳದೇ ಸಹಕರಿಸಿದರೆ, ಹತ್ತರಕಿಹಾಳ, ಉಕ್ಕಲಿ, ಮನಗೂಳಿ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಸುಲಭ ಸಂಪರ್ಕ ಸಾಧ್ಯವಾಗಲಿದ್ದು,ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸೆಯ ಬಸ್ ಸೌಲಭ್ಯ ಕಲ್ಪಿಸುವುದಾಗಿ ಪ್ರಕಟಿಸಿದರು.
ನಂದಿಹಾಳ ದಿಂದ ಹತ್ತರಕಿಹಾಳ ವರೆಗೆ 40 ಲಕ್ಷ ರೂ. ಬಸವವನಬಾಗೇವಾಡಿ ದಿಂದ ಜಾಲಿಹಾಳ ಮಾರ್ಗವಾಗಿ ನಂದಿಹಾಳ ಸಂಪರ್ಕ ಕಲ್ಪಿಸುವ 50 ಲಕ್ಷ ರೂ. ವೆಚ್ಚದ ಗ್ರಾಮೀಣ ರಸ್ತೆ ಹಾಗೂ ನಂದಿಹಾಳದಿಂದ ಮುತ್ತಗಿ ವರೆಗೆ 20 ಲಕ್ಷ ರೂ. ವೆಚ್ಚದ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಸಕ್ಕರೆ ಕಾರ್ಖಾನೆಗಳ ರಸ್ತೆ ಕರ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ವಿವರಿಸಿದರು.
2022-23 ನೇಸಾಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಮಗ್ರ ಶಿಕ್ಷಣ ಯೋಜನೆ ಅಡಿಯಲ್ಲಿ ಕೆ.ಬಿ.ಎಚ್.ಪಿ.ಎಸ್. ಶಾಲಾ ದುರಸ್ತಿ 20 ಲಕ್ಷ ರೂ. ಹಾಗೂ ಹಾಗೂ ತಲಾ 14.50 ಲಕ್ಷ ರೂ. ವೆಚ್ಚದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ಅನುದಾನ ಹಾಗೂ ಸಮಗ್ರ ಶಿಕ್ಷಣ ಯೋಜನೆ ಅಡಿಯಲ್ಲಿ ಎಚ್.ಪಿ.ಎಸ್. ಒಂದು ಹೊಸ ಕೊಠಡಿ ನಿರ್ಮಾಣ ಹಾಗೂ ಯು.ಬಿ.ಎಲ್.ಪಿ.ಎಸ್. ಹೊ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ವಿವರಿಸಿದರು.
ಭವಿಷ್ಯದಲ್ಲಿ ನಂದಿಹಾಳ ಪಿ.ಯು. ಗ್ರಾಮದಲ್ಲಿ ಕಾಲೇಜು ಸ್ಥಾಪಿಸುವ ಮೂಲಕ ಇನ್ನೂ ಹೆಚ್ಚಿನ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತೇನೆ. ಇದರಿಂದ ನಿಮ್ಮ ಗ್ರಾಮದ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ದೂರದೂರಿಗೆ ಓಫದಲು ಹೋಗುವ ಸಮಸ್ಯೆಗೆ ಪರಿಹಾರ ಸಿಗಲಿದೆ. ಪಕ್ಕದ ಮನಗೂಳಿ ಗ್ರಾಮದಲ್ಲೇ ಹಾಸ್ಟೆಲ್ ಹಾಗೂ ವಿಜ್ಞಾನ, ಕಲಾ, ವಾಣಿಜ್ಯ ವಿಷಯಗಳ ಸಹಿತ ಸರ್ಕಾರಿ ಪದವಿ ಕಾಲೇಜು ಸ್ಥಾಪಿಸಿದ್ದು, ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ಸಹಕಾರಿ ಆಗಿದೆ ಎಂದು ವಿವರಿಸಿದರು.
ಸುಶೀಕ್ಷಿತ ಓರ್ವ ತಾಯಿ ಸಾವಿರ ಶಿಕ್ಷಕರಿಗೆ ಸಮ ಎಂದು ಬಣ್ಣಿಸಿದ ಸಚಿವರು, ಸರ್ಕಾರಿ ನೇಮಕಾತಿಯಲ್ಲಿ ಶೇ.33 ರಷ್ಟು ಮಹಿಳೆಯರಿಗೆ ಮೀಸಲಾತಿ ಇದೆ. ನಿಮ್ಮ ಮಕ್ಕಳು ಶೈಕ್ಷಣಿಕ ಸಾಧನೆ ಮಾಡಿದರೆ, ಸರ್ಕಾರಿ ಉದ್ಯೋಗ ಪಡೆದು ನಿಮ್ಮ ಕುಟುಂಬ ಆರ್ಥಿಕ ಅಭಿವೃದ್ಧಿ ಸಾಧಿಸುವಲ್ಲಿ ಸಹಕಾರಿ ಆಗಲಿದೆ. ಹೀಗಾಗಿ ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಕಿವಿ ಮಾತು ಹೇಳಿದರು.
ಮನಗೂಳಿ ಗ್ರಾಮದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಕೆರೆ ನಿರ್ಮಿಸಿದ್ದು, ಅಂರ್ತಜಲ ಹೆಚ್ಚಳಕ್ಕೆ ಕಾರಣವಾಗಿದೆ. ಅದೇ ರೀತಿ ನಂದಿಹಾಳ ಪಿ.ಯು.ಗ್ರಾಮಸ್ಥರು ಸೇರಿದಂತೆ ಕ್ಷೇತ್ರದ ವಿವಿಧ ಹಳ್ಳಿಗರು ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳದೇ ಸಂರಕ್ಷಣೆಗೆ ಆದ್ಯತೆ ನೀಡಿ ಎಂದುಕಿವಿ ಮಾತು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಚಂದ್ರಶೇಖರಗೌಡ ಪಾಟೀಲ ಮನಗೂಳಿ,ಸಚಿವರಾದ ಶಿವಾನಂದ ಪಾಟೀಲ ಅವರ ಅಭಿವೃದ್ಧಿಪರ ಕಾಳಜಿಯಿಂದಾಗಿ ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರದಲ್ಲಿ ಎಲ್ಲ ರಸ್ತೆಗಳು ಅಭಿವೃದ್ಧಿಯಾಗಿವೆ. ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಇಡೀ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ವಿವರಿಸಿದರು.
ಸ್ಥಳೀಯ ಕೋಡೆಕಲ್ ಮಠದ ಸಂಗಯ್ಯಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಬಸವರಾಜ ಅವಟಿ, ಸಂಗನಗೌಡ ಪಾಟೀಲ, ರಾವುತ್ ಬೆಂಕಿ, ಹೊನ್ನಪ್ಪ ಹಾದಿಮನಿ, ಗಿರೀಶ್ ಹುಣಶ್ಯಾಳ, ಅನಿಲ ಹಾರಿವಾಳ, ಪ್ರಕಾಶ ಕೋಲ್ಕಾರ, ಬಸವರಾಜ ಜಾಲಗೇರಿ, ಈರಣ್ಣ ಕಲ್ಯಾಣಿ, ಸುರೇಶ ಬೆಂಕಿ, ಚನ್ನು ಜಹಗೀರದಾರ, ಪರಶು ಕೊಲ್ಹಾರ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ತಾ.ಪಂ. ಇಒ ಪ್ರಕಾಶ ದೇಸಾಯಿ, ಪಂಚಾಯತ್ ರಾಜ್ ಇಂಜಿನಿಯರಿಂಗನ ಎಇಇ ವಿಲಾಸ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪಿಡಿಒ ಸಸ್ಪೆಂಡ್‍ಗೆ ಸಚಿವರ ಸೂಚನೆ
ತಾವು ನಂದಿಹಾಳ ಪಿ.ಯು. ಗ್ರಾಮಕ್ಕೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ಗ್ರಾ.ಪಂ. ಪಿಡಿಓ ರವಿ ಗುಂಡಳ್ಳಿ ವರ್ತನೆ ವಿರುದ್ಧ ದೂರುಗಳ ಸುರಿಮಳೆಗರೆದರು. ತಾವು ನಮ್ಮೂರಿಗೆ ಭೇಟಿ ನೀಡುವ ಮುನ್ಸೂಚನೆ ಇದ್ದರೂ ಕೇಂದ್ರ ಸ್ಥಾನ ಬಿಟ್ಟಿದ್ದಾರೆ. ಜನರ ಸಮಸ್ಯೆ ಆಲಿಸಿ ಗ್ರಾಮದ ಅಭಿವೃದ್ಧಿಗೆ ಗಮನ ಹರಿಸುತ್ತಿಲ್ಲ ಎಂದು ಸಮಸ್ಯೆ ನಿವೇದಿಸಿಕೊಂಡರು.ಇದರಿಂದ ಕುಪಿತರಾದ ಸಚಿವರಾದ ಶಿವಾನಂದ ಪಾಟೀಲ ಅವರು, ಸದರಿ ಪಿಡಿಒ ಅವರನ್ನು ಸಸ್ಪೆಂಡ್ ಮಾಡುವಂತೆ ಸ್ಥಳದಲ್ಲಿದ್ದ ತಾ.ಪಂ. ಸಿಇಒ ಪ್ರಕಾಶ ದೇಸಾಯಿ ಅವರಿಗೆ ಸೂಚಿಸಿದರು.
ಬಿಬಿ-ಎಸ್.ಎಸ್.ಪಿ.1_ಎ
ನಂದಿಹಾಳ ಪಿ..ಯು. ಗ್ರಾಮದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಾದ ಶಿವಾನಂದ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.
3ಬಿಬಿ-ಎಸ್.ಎಸ್.ಪಿ.1_ಬಿ
ನಂದಿಹಾಳ ಪಿ..ಯು. ಗ್ರಾಮದಲ್ಲಿ ಶಾಲಾ ನೂತನ ಕೋಠಡಿ ನಿರ್ಮಾಣಕ್ಕೆ ಸಚಿವರಾದ ಶಿವಾನಂದ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.
3ಬಿಬಿ-ಎಸ್.ಎಸ್.ಪಿ.1_ಸಿ
ನಂದಿಹಾಳ ಪಿ..ಯು. ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಿ ಸಚಿವರಾದ ಶಿವಾನಂದ ಪಾಟೀಲ ಮಾತನಾಡಿದರು.