ಲಿಂಗಸೂಗೂರು: ಅದು ಐತಿಹಾಸಿಕ ಸ್ಥಳ. ಆ ಸ್ಥಳದಲ್ಲಿ ಕುಡಿಯುವ ನೀರಿಗಾಗಿ ಜನರು ಒಂದು ವಾರ್ಡಿನಿಂದ ಮತ್ತೊಂದು ವಾರ್ಡಿಗೆ ನೀರು ತರಲು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೋರಾಟಗಾರರು ಕುಡಿಯುವ ನೀರಿಗಾಗಿ ಆಗ್ರಹಿಸಿ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಸಂಘಟನೆಯ ಮುಖಂಡರು ಕುಡಿಯುವ ನೀರಿಗಾಗಿ ವಿನೂತನ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ಹೌದು ಮುದಗಲ್ ಪಟ್ಟಣದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದು, ಅದರಲ್ಲೂ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ. ಎಂಟತ್ತು ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದ್ದು ದಿನನಿತ್ಯ ಜನರು ಬೇರೆ ಬೇರೆ ವಾರ್ಡಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳದಿರುವದು ವಿಪರ್ಯಾಸ. ಅಲ್ಲದೆ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಹೋರಾಟ ಮಾಡಿದರೆ ಸ್ಪಂದಿಸದೇ ಇರುವುದು ದೊಡ್ಡ ದುರಂತವಾಗಿದೆ ಎಂದು ಕರವೇ ಮುದಗಲ್ ಘಟಕದ ಅಧ್ಯಕ್ಷ ಎಸ್. ಎ. ನಯೀಮ್ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಅಕ್ರೋಶ ಹೊರ ಹಾಕಿದರು.
ವಿರೋಧ ಪಕ್ಷದಲ್ಲಿದ್ದವರು ಜನರ ಸಮಸ್ಯೆಯನ್ನು ಅರಿತು ಅವರ ಜೊತೆ ಬೀದಿಗಿಳಿದು ಹೋರಾಟ ಮಾಡಬೇಕಾಗಿತ್ತು. ಆದರೆ ಹೋರಾಟ ಮಾಡುವುದು ಒಂದು ಕಡೆ ಇರಲಿ ಇದರ ಬಗ್ಗೆ ಹೇಳಿಕೆ ಕೊಡುವದಕ್ಕೂ ಮುಂದೆ ಬರದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನು ಗಮನಿಸಿದರೆ “ನಮ್ಮ ಅಧಿಕಾರ ಇದ್ದಾಗ ನೀವು ಕೇಳಬೇಡಿ ನಿಮ್ಮ ಅಧಿಕಾರ ಇದ್ದಾಗ ನಾವು ಕೇಳುವುದಿಲ್ಲಾ” ಎನ್ನುವಂತೆ ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ ಎಂದು ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು.
ಇನ್ನು ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ದಿನನಿತ್ಯ ಜನರು ಧೂಳಿನಿಂದ ಬೇಸತ್ತು ಹೋಗಿದ್ದಾರೆ. ಅಲ್ಲದೆ ಮಳೆ ಬಂದಾಗ ಕೆಸರಿನಲ್ಲಿ ನಡೆದಾಡುವುದು ಕಷ್ಟಕರವಾಗಿದೆ. ಕೆಸರಿನಲ್ಲಿ ಹಲವಾರು ವಾಹನಗಳು ಸಿಕ್ಕಿ ಬಿದ್ದು ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ನಿರ್ಮಾಣವಾಗಲಿಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರಣ ರಾಗಿದ್ದಾರೆ. ಆದ್ದರಿಂದ ದಿನನಿತ್ಯ ಜನರು ಮೂಲಭೂತ ಸೌಕರ್ಯಕ್ಕಾಗಿ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ ಈ ಹಿನ್ನಲೆಯಲ್ಲಿ ದಿನಾಕ 12-07-2022 ಮಂಗಳವಾರ ಬೆಳಿಗ್ಗೆ 11-00 ಗಂಟೆಗೆ ಎಮ್ಮೆಗಳ ಜೊತೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವುದರ ಮೂಲಕ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಎನ್. ಖಾದ್ರಿ, ಸಾಬು ಹುಸೇನ, ನಾಗರಾಜ ನಾಯಕ, ಇಸ್ಮಾಯಿಲ್ ಬಳಿಗಾರ, ಮಹಾಂತೇಶ ಚೆಟ್ಟರ, ಶಾಮೀದ ಅರಗಂಜಿ, ಅಬ್ದುಲ್ ಮಜೀದ, ಗ್ಯಾನಪ್ಪ, ಜಮೀರ್, ರಾಜ ಮಹಮ್ಮದ, ಆನಂದ್, ಸುಲ್ತಾನ್ ಉಪಸ್ಥಿತರಿದ್ದರು.