ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ದತ್ತು ಗ್ರಾಮವಾದ ರಾಯಚೂರು ತಾಲೂಕಿನ ವಡವಾಟಿ ಗ್ರಾಮದಲ್ಲಿ ಉಚಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ೨೦೨೧-೨೨ ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಪ್ರಯುಕ್ತವಾಗಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಬಾಯ್ದೊಡ್ಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಮ್ಮ ಹಾಗೂ ಹನುಮಂತ ದಂಪತಿಗಳು ರಕ್ತದಾನವನ್ನು ಮಾಡುವ ಮೂಲಕ ಚಾಲನೆಯನ್ನು ನೀಡಿದರು.
ಬಾಯ್ದೊಡ್ಡಿ ಗ್ರಾಮ ಪಂಚಾಯತಿಯ ಸದಸ್ಯರುಗಳು, ವಡವಾಟಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸಿಬ್ಬಂದಿ ಮತ್ತು ನಿರ್ವಹಣಾ ಸಮಿತಿಯ ಸದಸ್ಯರುಗಳು, ಶಾಲಾ ಶಿಕ್ಷಕ್ಷರು, ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಗ್ರಾಮಸ್ಥರು ರಕ್ತದಾನವನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾದರು. ರಿಮ್ಸ್ ಬೋಧಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾಯಾದ ಡಾ. ಗುರುರಾಜ ಕುಲಕರ್ಣಿಯವರು ಶಿಬಿರವನ್ನು ಉದ್ದೇಶಿಸಿ ಮಾತನಾಡಿ ರಕ್ತವನ್ನು ಕೇವಲ ಮಾನವನ ಶರೀರದಲ್ಲಿ ಮಾತ್ರ ಉತ್ಪಾದಿಸಬಹುದು.
ಅದಕ್ಕೆ ಪರ್ಯಾಯಗಳಿಲ್ಲ.
ಹಾಗಾಗಿ ಆರೋಗ್ಯವಂತ ನಾಗರಿಕರು ಸ್ವಯಂಪ್ರೇರಿತರಾಗಿ ರಕ್ತದಾನವನ್ನು ಮಾಡುವ ಮೂಲಕ ಅಗತ್ಯವಿರುವವರಿಗೆ ಆಸರೆಯಾಬೇಕು. ದಾನಿಯ ಒಂದು ಯುನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಹುದು. ರಕ್ತದಾನ ಮಹಾದಾನವಾಗಿದೆ. ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು. ರಾಷ್ಟ್ರೀಯ ಸೇವಾ ಘಟಕದ ಕಾರ್ಯಕ್ರಮ ಅಧಿಕಾರಿಯಾದ ಡಾ. ಸಂತೋಷಕುಮಾರ ರೇವೂರ್ ಮಾತನಾಡಿ ಸದರಿ ರಕ್ತದಾನ ಶಿಬಿರದ ಆಯೋಜನೆಗಾಗಿ ಸ್ವಯಂಸೇವಕಿಯರು ಗ್ರಾಮದಲ್ಲಿ ಮನೆ ಮನೆಗೆ ಭೇಟಿನೀಡಿ ಹಾಗೂ ಬೀದಿ ನಾಟಕಗಳ ಮೂಲಕ ಯುವಜನತೆಯಲ್ಲಿ ಮತ್ತು ಗ್ರಾಮಸ್ಥರಲ್ಲಿ ರಕ್ತದಾನದ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ನೀಡುವುದರ ಮೂಲಕ ಜಾಗೃತಿಯನ್ನು ಮೂಡಿಸಿದುದರ ಪರಿಣಾಮವಾಗಿ ಇವತ್ತಿನ ರಕ್ತದಾನ ಶಿಬಿರದಲ್ಲಿ ಎಲ್ಲರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಸಾಧ್ಯವಾಗುವಂತಾಗಿದೆ.
ಶಿಬಿರದ ಯಶಸ್ವೀ ಆಯೋಜನೆಗೆ ಶ್ರಮಿಸಿದ ಎಲ್ಲ ಸ್ವಯಂಸೇವಕಿಯರಿಗೂ ಹಾರ್ಧಿಕ ಅಭಿನಂದನೆಗಳನ್ನು ಸಲ್ಲಿಸಿದರು. ಬಾಯ್ದೊಡ್ಡಿ ಗ್ರಾಮ ಪಂಚಾಯತಿಯ ಮುಖಂಡರು ಹಾಗೂ ವಡವಾಟಿಯ ಯುವ ಮುಖಂಡರೂ ಆದ ಕೆ ಸಿ ನರಸಣ್ಣ, ಈ ಆಂಜನೇಯ, ರವಿ, ಮಲ್ಲಯ್ಯ, ಹನುಮಂತ, ಡಬ್ಬಾ ತಿಮ್ಮಪ್ಪ ಹಾಗೂ ಪಂಚಾಯತಿಯ ಎಲ್ಲ ಸದಸ್ಯರೂ ಒಟ್ಟಾಗಿ ಸದರಿ ರಕ್ತದಾನ ಶಿಬಿರದ ಆಯೋಜನೆಗೆ ಸಹಾಯವನ್ನು ಮಾಡಿ ಶಿಬಿರದ ಯಶಸ್ವೀ ಆಯೋಜನೆಗೆ ಶ್ರಮವಹಿಸಿದರು. ಶಿಬಿರದಲ್ಲಿ ಭಾಗಿಯಾಗಿ ಶಿಬಿರದ ಆಯೋಜನೆಗೆ ಸಹಕರಿಸಿದ ರಿಮ್ಸ್ ಬೋಧಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿಗಳಿಗೂ ಹಾಗೂ ಎಲ್ಲ ಸಿಬ್ಬಂದಿ ವರ್ಗಕ್ಕೂ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.