ಬೆಂಗಳೂರು: ಪಂಚರಾಜ್ಯ ಚುನಾವಣೆ ಸಮೀಪಸುತ್ತಿದೆ. ಇನ್ನು ಕೇವಲ ಆರು ತಿಂಗಳಲ್ಲಿ ಕರ್ನಾಟಕಕ್ಕೆ ಮತ್ತೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಎಲ್ಲಾ ಪಕ್ಷಗಳೂ ತಯಾರಿಯಲ್ಲಿ ತೊಡಗಿವೆ. ಇಡೀ ದೇಶದಲ್ಲಿ ಸೋಲು ಕಾಣುತ್ತಿರುವ ಕಾಂಗ್ರೆಸ್ ಗೆ ಕರ್ನಾಟಕವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿಯೇ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಗೆ ಅಧ್ಯಕ್ಷ ಪಟ್ಟ ಕಟ್ಟಿ ಯಾತ್ರೆ ಮಾಡುತ್ತಿದೆ. ಇನ್ನೊಂದೆಡೆ ಕಿಂಗ್ ಮೇಕರ್ ಎನಿಸಿಕೊಳ್ಳುವ ಜೆಡಿಎಸ್ ತನ್ನ ಪಕ್ಷದಲ್ಲಿರುವ ಅಸಮಾಧಾನಗಳನ್ನು ಸರಿಪಡಿಸಿಕೊಳ್ಳುವಲ್ಲಿ ಕಾರ್ಯನಿರತವಾಗಿದೆ.
ಅದೆಲ್ಲದರ ನಡುವೆ ಈ ಬಾರಿ ಪೂರ್ಣ ಬಹುಮತದ ನಿರೀಕ್ಷೆಯಲ್ಲಿರುವ ಬಿಜೆಪಿ ಹೈಕಮಾಂಡ್ ಮಾತ್ರ ತಾನೇ ಖುದ್ದು ರಣಕಣಕ್ಕೆ ಇಳಿಯಲು ಸಜ್ಜಾಗಿದೆ ಬಣ ರಾಜಕೀಯಕ್ಕೆ ಈ ಬಾರಿ ಇತಿಶ್ರೀ ಹಾಡಲು ಮುಂದಾಗಿರುವ ಅಮಿತ್ ಷಾ ಟಿಕೆಟ್ ಹಂಚಿಕೆಯ ಕುರಿತು ನಿರ್ಧರಿಸಲು ಕೇಂದ್ರದಿಂದ ತನ್ನ ನಂಬಿಕಸ್ತ ತಂಡವನ್ನು ಕರ್ನಾಟಕಕ್ಕೆ ಕಳುಹಿಸುತ್ತಿರುವ ಕುರಿತು ಸುದ್ದಿ ಹರಿದಾಡುತ್ತಿದೆ.
ಕಳೆದ ಬಾರಿ ಕೊನೇ ಕ್ಷಣದಲ್ಲಿ ಟಿಕೆಟ್ ನೀಡಿ ಸಣ್ಣ ಅಂತರದಲ್ಲಿ ಹಲವು ಕ್ಷೇತ್ರಗಳನ್ನು ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ಆ ತಪ್ಪನ್ನು ಸರಿ ಮಾಡಿಕೊಂಡು ಬಾರಿ ಬಹುತೇಕ ಕ್ಷೇತ್ರಗಳಿಗೆ ಆರು ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರೀಯೆಗೆ ಇಳಿಯುವ ಸಾಧ್ಯತೆ ಇದೆ. ಅದಕ್ಕಾಗಿ ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳೊಂದಿಗೆ ನೇರವಾಗಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲು ಕರ್ನಾಟಕಕ್ಕೆ ಇನ್ನೆರೆಡು ದಿನದಲ್ಲಿ ಕೇಂದ್ರದಿಂದ 12 ಜನರ ರಹಸ್ಯ ತಂಡವೊಂದು ಭೇಟಿ ನೀಡಲಿದೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ.
ಮೂರು ದಿನಗಳ ಕಾಲ ಬೆಂಗಳೂರಿನಲ್ಲೇ ಉಳಿದುಕೊಳ್ಳಲಿರುವ ಈ ತಂಡ ಅಭ್ಯರ್ಥಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಹೈಕಮಾಂಡ್ ಗೆ ಅಂತಿಮ ವರದಿ ಸಲ್ಲಿಸಲಿದೆ. ಈಗಾಗಲೇ ಹಲವು ಕೇಂದ್ರದ ನಾಯಕರು ಕರ್ನಾಟಕಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿರುವುದರಿಂದ ಈ ಬಾರಿ ಹಲವರಿಗೆ ಟಿಕೆಟ್ ಪಕ್ಕಾ ಆಗುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ.
ಹೊಸಮುಖಗಳಿಗೆ ಮಣೆ ಹಾಕುವ ಸಾಧ್ಯತೆ:
ಉತ್ತರ ಪ್ರದೇಶದಲ್ಲಿ ಈ ಬಾರಿ ಹೊಸ ಮುಖಗಳಿಗೆ ಅವಕಾಶ ಕೊಟ್ಟು ಸಕ್ಸಸ್ ಕಂಡಿರುವ ಬಿಜೆಪಿ ಅದೇ ಮಾದರಿಯನ್ನು ಕರ್ನಾಟಕದಲ್ಲೂ ತರುವ ಯೋಚನೆಯಲ್ಲಿದೆ. ಹಾಗಾಗಿ ಈ ಸಲ ಸುಮಾರು 100 ವಿಧಾನ ಸಭಾ ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ಕೊಡಲು ಬಿಜೆಪಿ ಯೋಚಿಸುತ್ತಿದ್ದು ಹಲವು ಸಂಘಪರಿವಾರದ ನಾಯಕರಿಗೆ, ನಿವೃತ್ತ ಅಧಿಕಾರಿಗಳಿಗೆ, ಸಮಾಜ ಸೇವಕರಿಗೆ ಮತ್ತು ಹಿಂದೂ ಹೋರಾಟಗಾರರಿಗೆ ಈ ಅವಕಾಶ ಸಿಗುವ ಸಾಧ್ಯತೆಗಳಿವೆ. ಈಗಾಗಲೇ ಕೇಂದ್ರದ ತಂಡ ಭೇಟಿ ಕೊಡುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯದ ಎಲ್ಲಾ ಕ್ಷೇತ್ರದ ಆಕಾಂಕ್ಷಿಗಳೂ ಆದಿತ್ಯವಾರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.