ಲಿಂಗಸೂಗೂರು: ಆ ಗ್ರಾಮದಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತಿದ್ದವು. ಮದುವೆಯ ಕಾರ್ಯಕ್ರಮಕ್ಕೆ ಅನೇಕ ಜನರು ಬೈಕ್ಗಳನ್ನು ತಂದಿದ್ದರು. ಆದರೆ ಬೈಕ್ ಕಳ್ಳರಿಬ್ಬರು ಬೈಕ್ಗಳನ್ನು ಕದ್ದು ಇದನ್ನೇ ಬಂಡವಾಳವಾಗಿ ಮಾಡಿಕೊಂಡು ಶೋಕಿ ಮಾಡುತ್ತಿದ್ದರು. ಕೊನೆಗೂ ಖಧೀಮರ ಅದೃಷ್ಟ ಕೈ ಕೊಟ್ಟು ಪೊಲೀಸರ ಅತಿಥಿಯಾಗಿದ್ದಾರೆ.
ತಾಲೂಕಿನ ಮುದಗಲ್ ಪಟ್ಟಣ ಸಮೀಪ ಕನ್ನಾಪೂರ ಹಟ್ಟಿ ಗ್ರಾಮದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವಿತ್ತು. ಬೈಕ್ ಕಲ್ಳರು ತಮಗೆ ಬೇಕಾದ ಬೈಕ್ಗಳನ್ನು ಕದ್ದು ಪರಾರಿಯಾಗಿ ಮೋಜು ಮಸ್ತಿ ಮಾಡುತ್ತಿದ್ದರು. ಕಳ್ಳತನ ಮಾಡಿದ ಬೈಕ್ ತಗೊಂಡು ಜಾಲಿಯಾಗಿ ಸುತ್ತಾಡುವ ವೇಳೆಯಲ್ಲಿ ಕಳ್ಳರು ಪೋಲಿಸರ ವಿಶೇಷ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಜಾತ್ರೆ, ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಕಳ್ಳರು ಬೈಕ್ ಕದ್ದು ತಮ್ಮ ಕೈಚಳಕ ತೋರುತ್ತಿರುವ ಅಪ್ಪಾಜಿ ತಂದೆ ಸಂಗಪ್ಪ ದೊಡ್ಡಮನಿ ಸಾ. ಗುಡಿಹಾಳ, ಶ್ರೀ ಧರ ತಂದೆ ಪರಸಪ್ಪ ಘಂಟೇರ ಮೇಗಳಪೇಟೆ ಎನ್ನುವ ಇಬ್ಬರು ಕಳ್ಳರು ಪೋಲಿಸರ ಅತಿಥಿಯಾಗಿದ್ದಾರೆ.
ಬೆಳಗಿನ ಸಮಯದಲ್ಲಿ ಪಿಎಸ್ಐ ಪ್ರಕಾಶ ರೆಡ್ಡಿ ಡಂಬಳ್ ಹಾಗೂ ಸಿಬ್ಬಂದಿಗಳಾದ ಪಂಪಾಪತಿ, ಅಡಿವೆಪ್ಪ, ಮಂಜುನಾಥ, ಅಮರೇಶ ಜಂಟಿಯಾಗಿ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತಿರುವಾಗ ಮೇಗಳಪೇಟೆಯ ಅಂಕಲಿಮಠ ಕ್ರಾಸ್ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪವಾಗಿ ಓಡಾಡುವದನ್ನು ಗಮನಿಸಿ ದ್ವಿಚಕ್ರ ವಾಹನದ ದಾಖಲೆಗಳನ್ನು ಕೇಳಿದ್ದಾರೆ. ಆರೋಪಿಗಳ ಬಳಿ ಯಾವುದೇ ದಾಖಲೆಗಳು ಇಲ್ಲದ್ದಿದ್ದಾಗ ಇಬ್ಬರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ವಿವಾಹದ ಕಾರ್ಯಕ್ರಮದಲ್ಲಿ ಒಟ್ಟು 2,80,000 ಬೆಲೆ ಬಾಳುವ 6 ಸೈಕಲ್ ಮೋಟಾರ್ ಕದ್ದಿರುವ ಬಗ್ಗೆ ಕಳ್ಳರು ಒಪ್ಪಿಕೊಂಡಿದ್ದಾರೆ. ಪೋಲಿಸರ ಈ ಕಾರ್ಯವೈಖರಿಗೆ ಡಿವೈಎಸ್ಪಿ ಎಸ್ ಎಸ್ ಹುಲ್ಲೂರು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಸ್ಕಿ ವೃತ್ತ ಸಿಪಿಐ ಸಂಜೀವ ಬಳಿಗಾರ, ಠಾಣೆ ಪಿಎಸ್ಐ ಪ್ರಕಾಶ್ ರೆಡ್ಡಿ ಡಂಬಳ್, ಸಿಬ್ಬಂದಿಗಳಾದ ಚೆನ್ನಪ್ಪ ಯಾಳವರ್, ಅಡಿವೆಪ್ಪ, ಮಂಜುನಾಥ, ಶಿವನಗೌಡ, ಅಮರೇಶ, ಗಂಗಾಧರ ಉಪಸ್ಥಿತರಿದ್ದರು.