ಅಫಜಲಪುರ: ತಾಲೂಕಿನ ಮದರಾ (ಬಿ) ಗ್ರಾಮದಲ್ಲಿ ವ್ಯಕ್ತಿಯೊಬ್ಬರ ನಿಧನದ ಹಿನ್ನೆಲೆ ಅಂತ್ಯಸಂಸ್ಕಾರಕ್ಕಾಗಿ ಬಳಸುವ ರಥದ ರಿಪೇರಿಗಾಗಿ ಚವಡಾಪುರ ಗ್ರಾಮದ ಗ್ಯಾರೆಜೊಂದರಲ್ಲಿ ರಿಪೇರಿಗೆಂದು ತೆಗೆದುಕೊಂಡು ಹೋದ ಸಂದರ್ಭದಲ್ಲಿ ಕೆಲ ದುಷ್ಕರ್ಮಿಗಳು ಮದರಾ(ಬಿ) ಗ್ರಾಮ ಪಂಚಾಯತ್ ಅಧ್ಯಕ್ಷ ಗೌಡಪ್ಪಗೌಡ ಬಿರಾದಾರ ಅವರ ಕಣ್ಣಿನಲ್ಲಿ ಖಾರದ ಪುಡಿ ಎರಚಿ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾದ ಘಟನೆಯು ಇಂದು 11 ಗಂಟೆಯ ಸುಮಾರಿಗೆ ನಡೆದಿದೆ.
ತೀವ್ರ ರಕ್ತಸ್ರಾವದಿಂದ ಗೌಡಪ್ಪಗೌಡ ಬಿರಾದರ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಮರಣೋತ್ತರ ಪರೀಕ್ಷೆಗೆ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಎರಡು ಕುಟುಂಬಗಳ ಮಧ್ಯದ ಹಳೆಯ ವೈಷಮ್ಯದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಲ್ಬುರ್ಗಿ ಹೆಚ್ಚುವರಿ ಎಸ್.ಪಿ ಎನ್. ಶ್ರೀನಿಧಿ, ಡಿವೈಎಸ್ಪಿ ಗೋಪಿ ಬಿ. ಆರ್, ಪಿ.ಎಸ್.ಐ ಗಳಾದ ರಾಹುಲ್ ಪವಾಡೆ, ಮಡಿವಾಳಪ್ಪ ಬಾಗೋಡಿ, ಸವಿತಾ ಕಲ್ಲೂರ ಶ್ವಾನದಳದ ಸಿಬ್ಬಂದಿ, ಎಫ್.ಎಸ್.ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ.
ಈ ಸಂಬಂಧ ಅಫಜಲಪುರ ತಾಲೂಕಿನ ದೇವಲಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.