ಪದ್ಮಭೂಷಣ ಪುಟ್ಟರಾಜ ಕವಿಗವಾಯಿ “ರಾಷ್ಟ್ರೀಯ ಪ್ರಶಸ್ತಿ” ಪ್ರದಾನ
ವಿಜಯಪುರ : ಶಿಕ್ಷಣ ಮತ್ತು ಸಾಹಿತ್ಯದಲ್ಲಿ ಮಾಡಿದ ಸಾಧನೆಗಾಗಿ ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ, ಸಾಹಿತಿ ಪ್ರೊ. ಸಿದ್ದು ಸಾವಳಸಂಗ ಅವರಿಗೆ “ಪದ್ಮಭೂಷಣ ಪುಟ್ಟರಾಜ ಕವಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ 03 ಮಾರ್ಚ್ ರಂದು ಚೇತನ ಫೌಂಡೇಶನ್ ಕರ್ನಾಟಕ ಇವರ ವತಿಯಿಂದ ಸಂಗೀತ ಸಾಮ್ರಾಟ ಗಾನ ವಿಶಾರದ ಡಾಕ್ಟರ್ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ 110 ನೆಯ ಜಯಂತಿ ಕಾರ್ಯಕ್ರಮದಲ್ಲಿ ಮುಕ್ತ ಕವಿಗೋಷ್ಠಿ ಮತ್ತು ಸಂಗೀತ ಹಾಗೂ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪ್ರೊ. ಸಿದ್ದು ಸಾವಳಸಂಗ ಅವರು 27 ವರ್ಷಗಳಿಂದ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಿಂದ ಉಪನ್ಯಾಸಕರಾದ ಇವರು ಪ್ರವೃತ್ತಿಯಿಂದ ಸಾಹಿತಿಗಳು. ಈಗಾಗಲೇ ಇವರಿಗೆ ರಾಷ್ಟ್ರಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ ದೊರೆತಿದೆ. ಇವರು ಈಗಾಗಲೇ “ಹೃದಯ ಹೂವಿನ ಹಂದರ” ಹನಿಗವನ ಸಂಕಲನ ಹಾಗೂ “ವಚನ ಸಂಜೀವಿನಿ” ಆಧುನಿಕ ವಚನಗಳ ಸಂಕಲನಗಳನ್ನು ಹೊರತಂದಿದ್ದು ಅವು ಓದುಗರ ಮೆಚ್ಚುಗೆಯನ್ನು ಗಳಿಸಿಕೊಂಡಿವೆ. ಕವನ, ಹನಿಗವನ, ಲೇಖನ, ಕಥೆ, ವಿಮರ್ಶಾ ಬರಹ, ಆಧುನಿಕ ವಚನಗಳು ಹಾಗೂ ಅಂಕಣ ಬರಹಗಳನ್ನು ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ಇವರ ಈ ಶಿಕ್ಷಣ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ಮೇಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಸದರಿ ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಹಿರಿಯ ಕವಿಗಳಾದ ನೀ ಶ್ರೀಶೈಲ, ಮುಖ್ಯ ಅತಿಥಿಗಳಾದ ವಿದೂಷಿ ಶ್ರೀಮತಿ ವನಮಾಲ ಮಾನಶೆಟ್ಟಿ ಹಾಗೂ ಚೇತನ ಫೌಂಡೇಶನ್ ಅಧ್ಯಕ್ಷರಾದ ಚಂದ್ರಶೇಖರ್ ಮಾಡಲಗೇರಿ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಪ್ರೊ. ಸಿದ್ದು ಸಾವಳಸಂಗ ಇವರಿಗೆ “ಪದ್ಮಭೂಷಣ ಪುಟ್ಟರಾಜ ಕವಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ”ಯನ್ನು ಪ್ರದಾನ ಮಾಡಲಾಯಿತು. ನಾಡಿನ ಬೇರೆ ಬೇರೆ ಭಾಗಗಳಿಂದ ನೂರಾರು ಸಾಹಿತ್ಯಾಸಕ್ತರು, ಸಂಗೀತ ಪ್ರೇಮಿಗಳು ಹಾಗೂ ಪ್ರೇಕ್ಷಕರು ಆಗಮಿಸಿದ್ದರು.