ಅಭಿವೃದ್ಧಿಯಿಂದ ನಗರದಲ್ಲಿ ಅಸ್ತಮಾ ದೂರ
ವಿಜಯಪುರ: ರಸ್ತೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣ, ಸ್ವಚ್ಛತೆ ಜೊತೆಗೆ ಸಸಿಗಳ ನೆಡುವುದು ಹೆಚ್ಚಾಗಿದ್ದರಿಂದ ನಗರದಲ್ಲಿ ಶೇ 90 ರಷ್ಟು ಅಸ್ತಮಾ ಕಡಿಮೆ ಆಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಹೇಳಿದರು.
ನಗರದ ಹರಕಾರಿ ಹಾಗೂ ಚಾಣಕ್ಯ ಬಡಾವಣೆಯಲ್ಲಿ ಶ್ರೀ ಶಿವ ಗಣೇಶ ಉತ್ಸವ ಮಂಡಳಿಯ ನೂತನ ಶ್ರೀ ಗಜಾನನ ಮಂಟಪ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಆಗಿರುವ ಅಭಿವೃದ್ಧಿಯಿಂದ ದೇಶದಲ್ಲಿ ಅತ್ಯುತ್ತಮ ವಾತಾವರಣ ಪಟ್ಟಿಯಲ್ಲಿ ವಿಜಯಪುರ 3ನೇ ಸ್ಥಾನದಲ್ಲಿದೆ. ಮಳೆಯ ಪ್ರಮಾಣವೂ ಹೆಚ್ಚಿದೆ ಎಂದರು.
ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿ ನೀರಲ್ಲಿ ವಿಸರ್ಜನೆ ಮಾಡುವುದರಿಂದ ಪರಿಸರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಬಣ್ಣ ಲೇಪಿತ, ಕೆಮಿಕಲ್ ಬಳಸಿದ ಮೂರ್ತಿಗಳಿಂದ ಪರಿಸರಕ್ಕೆ ಮಾರಕ. ಇದನ್ನು ತಡೆಯುವ ನಿಟ್ಟಿನಲ್ಲಿ ನಗರದಲ್ಲಿ ಶಾಶ್ವತವಾಗಿ ಪೈಬರ್ ಗಣೇಶ ಮೂರ್ತಿಗಳನ್ನು ಸ್ಥಾಪಿಸಿ, ಅದರ ಜೊತೆಗೆ ಪ್ರತಿ ವರ್ಷ ಗಣೇಶ ಚತುರ್ಥಿಗೆ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಪರಿಸರಕ್ಕೆ ಉಪಕಾರ ಮಾಡಿದಂತಾಗುತ್ತದೆ ಎಂದು ಹೇಳಿದರು.
ಮಲಘಾಣದ ಶಿವಕುಮಾರ ಮೃತ್ಯುಂಜಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಗಿರೀಶ ಪಾಟೀಲ, ಶಿವ ಗಣೇಶ ಉತ್ಸವ ಮಂಡಳಿ ಅಧ್ಯಕ್ಷ ಸಂತೋಷ ತಳಕೇರಿ, ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ಚಂದ್ರು ಚೌದರಿ, ಮುಖಂಡರಾದ ಪಾಂಡುಸಾಹುಕಾರ ದೊಡಮನಿ, ವಿನಾಯಕ ತಳಕೇರಿ, ಮುರಗೇಶ ಶಹಾಪುರ, ಅರುಣಕುಮಾರ ಪತ್ತಾರ, ಪ್ರವೀಣ ವಾಗ್ವಾಲೆ, ಪರಿಸರ ಪ್ರೇಮಿ ಈರಪ್ಪ ನಾಶಿ ಸೇರಿದಂತೆ ಮತ್ತಿತರರು ಇದ್ದರು.



















