ಮುದ್ದೇಬಿಹಾಳ : ಫೆ.೧೫ರಂದು ನಡೆಯಲಿರುವ ಮುದ್ದೇಬಿಹಾಳ ತಾಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನಾಟಕಕಾರ, ಕವಿ, ಹಿರಿಯ ಸಾಹಿತಿ, ನಿವೃತ್ತ ಮುಖ್ಯಾಧ್ಯಾಪಕ ಹೀಗೆ ಬಹುಮುಖ ವ್ಯಕ್ತಿತ್ವ ಹೊಂದಿರುವ ಅಶೋಕ ಪಿ.ಮಣಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಬುಧವಾರ ಅವರಿಗೆ ಅಧಿಕೃತ ಪತ್ರ ನೀಡಿ ಸನ್ಮಾನಿಸಲಾಯಿತು.
ಕಸಾಪ ಸಮ್ಮೇಳನ ಕಾರ್ಯಾಲಯದಲ್ಲಿ ಪದಾಧಿಕಾರಿಗಳ ಸಮೇತ ಕಾರ್ಯಕಾರಿಣಿ ಸಭೆ ನಡೆಸಿ ಅಲ್ಲಿ ಮೊದಲು ಮಣಿ ಅವರ ಆಯ್ಕೆಗೆ ಒಪ್ಪಿಗೆ ಪಡೆದು ಅದನ್ನು ಅನುಮೋದಿಸಿ ಅಧಿಕೃತಗೊಳಿಸಲಾಯಿತು. ನಂತರ ವಿದ್ಯಾನಗರದಲ್ಲಿರುವ ಮಾರುತೇಶ್ವರ ದೇವಸ್ಥಾನದ ಬಳಿ ಸೇರಿ ಅಲ್ಲಿಂದ ನೂರಾರು ಸಂಖ್ಯೆಯಲ್ಲಿದ್ದ ಸಾಹಿತಿಗಳಾದಿಯಾಗಿ ಎಲ್ಲ ಕನ್ನಡಾಭಿಮಾನಿಗಳು ಕನ್ನಡಮ್ಮನ ಜಯಘೋಷಣೆ ಹಾಕುತ್ತ ಮಣಿ ಅವರ ನಿವಾಸಕ್ಕೆ ಆಗಮಿಸಿ ಅವರಿಗೆ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಂದೇಶ ಪತ್ರ ಹಸ್ತಾಂತರಿಸಿ ಸರ್ವಾಧ್ಯಕ್ಷತೆ ಒಪ್ಪಿಕೊಳ್ಳುವಂತೆ ಮನವಿ ಮಾಡಿದರು.
ಮಣಿ ಅವರ ಮನೆಯ ಎದುರೇ ನಡೆದ ಸರಳ ಸಮಾರಂಭದಲ್ಲಿ ಮಣಿ ಅವರಿಗೆ ಪತ್ರ ನೀಡಿ, ತುಂಬು ಸನ್ಮಾನದ ಜೊತೆಗೆ ಗೌರವಿಸಲಾಯಿತು. ಇದಕ್ಕೂ ಮೊದಲು ಕಸಾಪ ಗೌರವ ಕಾರ್ಯದರ್ಶಿ ಸಿದ್ದನಗೌಡ ಬಿಜ್ಜೂರ ಅವರ ಕಸಾಪ ಸ್ವಾಗತ ಸಮಿತಿಯ ಅನುಮೋದನೆ ಮತ್ತು ಆಯ್ಕೆ ವಿಷಯವನ್ನು ಎಲ್ಲರಿಗೂ ತಿಳಿಸಿ ೪-೫ ಜನ ಅರ್ಹರನ್ನು ಗುರ್ತಿಸಲಾಗಿತ್ತು. ಅವರಲ್ಲಿ ಮಣಿ ಅವರನ್ನು ಎಲ್ಲರ ಒಪ್ಪಿಗೆ ಪಡೆದು ಅಧಿಕೃತಗೊಳಿಸಲಾಯಿತು. ಕಸಾಪ ಜಿಲ್ಲಾ ಘಟಕದವರು ಕಸಾಪ ತಾಲೂಕು ಘಟಕದ ತೀರ್ಮಾನವನ್ನು ಎತ್ತಿ ಹಿಡಿದು ತಮ್ಮ ಒಪ್ಪಿಗೆ ಸೂಚಿಸಿದರು. ಮಣಿ ಅವರು ೩-೪ ಚಲನಚಿತ್ರಗಳಲ್ಲಿ ನಟಿಸಿ ತಮ್ಮ ಕಲಾಪಾಂಡಿತ್ಯವನ್ನೂ ಪ್ರದರ್ಶಿಸಿದ್ದು ಮಾತ್ರವಲ್ಲದೆ ತಾಲೂಕಿನ ಸಾಹಿತ್ಯಿಕ, ನಾಟಕ ವಲಯದಲ್ಲಿ ವಿಶೇಷ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ ಎಂದರು.
ಇನ್ನೋರ್ವ ಕಸಾಪ ಗೌರವ ಕಾರ್ಯದರ್ಶಿ ವೈ.ಎಚ್.ವಿಜಯಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಣಿ ಅವರ ಆಯ್ಕೆಯಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಕಾಮರಾಜ ಬಿರಾದಾರ ಅವರ ದಿಟ್ಟತನದ ನಿಲುವನ್ನು ಪ್ರಶಂಶಿಸಿದರು.
ಹಿರಿಯ ಸಾಹಿತಿ ಪ್ರೊ| ಬಿ.ಎಂ.ಹಿರೇಮಠ ಅವರು ಮಾತನಾಡಿ ಮಣಿ ಅವರ ಆಯ್ಕೆಯಲ್ಲಿ ಗಟ್ಟಿತನ ತೋರಿಸಿದ ಅಧ್ಯಕ್ಷ ಕಾಮರಾಜ ಬಿರಾದಾರ ಅವರು ಅಭಿನಂದನಾರ್ಹರು. ಕಾಮರಾಜ ಅವರು ಜಾತಿ ಇಲ್ಲದ ನೀತಿವಂತರು. ಮಣಿ ರಂಗಕರ್ಮಿಯಾಗಿ, ಸಾಹಿತಿಯಾಗಿ ತನ್ನದೇ ಛಾಪು ಮೂಡಿಸಿದಂಥವರು. ಇದೊಂದು ಸೂಕ್ತ ಆಯ್ಕೆಯಾಗಿದ್ದು ಎಲ್ಲರ ಒಮ್ಮತ ಇದಕ್ಕಿದೆ. ಸಮ್ಮೇಳನ ಯಶಸ್ವಿಗೊಳಿಸುವುದರತ್ತ ಎಲ್ಲರೂ ಇನ್ನು ಮುಂದೆ ಕ್ರಿಯಾಶೀಲರಾಗಿ ಕಾರ್ಯತತ್ಪರರಾಗಬೇಕು ಎಂದರು.
ಅಧ್ಯಕ್ಷ ಕಾಮರಾಜ ಬಿರಾದಾರ ಅವರು ಮಾತನಾಡಿ ಸರ್ವಾಧ್ಯಕ್ಷತೆಗೆ ಅರ್ಹರು, ಸಮರ್ಥರನ್ನೇ ಆಯ್ಕೆ ಮಾಡಿರುವ ಸಂತೃಪ್ತಿ ಇದೆ. ನಾನು ಸಾಹಿತಿ ಅಲ್ಲದಿದ್ದರೂ ಸಂಘಟಕ ಎಂದು ನನ್ನನ್ನು ಈ ಹುದ್ದೆಯಲ್ಲಿ ಕೂಡಿಸಿದ್ದು ಸಮ್ಮೇಳನ ಯಶಸ್ವಿಗೊಳಿಸುವ ನನ್ನ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ, ನಿಸ್ವಾರ್ಥದಿಂದ ನಿಭಾಯಿಸುತ್ತೇನೆ. ಎಲ್ಲರ ಸಹೃದಯವಂತರು, ಸಾಹಿತ್ಯ ಮತ್ತು ಕನ್ನಡ ಪ್ರೇಮಿಗಳು ನನಗೆ ಕೈಜೋಡಿಸಿ ಹೆಗಲಿಗೆ ಹೆಗಲು ಕೊಟ್ಟು ಯಶಸ್ವಿನಲ್ಲಿ ಪಾಲುದಾರರಾಗಬೇಕು ಎಂದರು.
ಅಶೋಕ ಮಣಿ ಅವರು ಕೃತಜ್ಞಾಪೂರ್ವಕ ನುಡಿಗಳನ್ನಾಡುತ್ತ ಭಾವಪರವಶರಾಗಿ ತಮ್ಮ ಹಿರಿಯರು ಬಿಟ್ಟು ಹೋದ ಸಾಹಿತ್ಯಿಕ ಚಿಂತನೆಗಳು ತಮ್ಮ ಕಾಲದಲ್ಲಿ ಮುಂದುವರೆದಿದ್ದರ ಸಂಕೇತವಾಗಿ ಈ ಸರ್ವಾಧ್ಯಕ್ಷತೆ ಹುದ್ದೆ ಅರಸಿ ಬಂದಿದೆ. ತನ್ಮೂಲಕ ಸಣ್ಣ ಪ್ರಮಾಣದಲ್ಲಿರುವ ದಿಗಂಬರ ಜೈನ ಸಮಾಜಕ್ಕೆ ಗೌರವ ಕಟ್ಟಿಕೊಟ್ಟಂತಾಗಿದೆ. ಅವಕಾಶ ಕೊಟ್ಟ ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಸಮ್ಮೇಳನ ಯಶಸ್ವಿಯಾಗಲು ಕಾಯಾ ವಾಚಾ ಮನಸಾ ಒಪ್ಪಿಗೆ ನೀಡಿ ಗೌರವವನ್ನು ಸ್ವೀಕರಸುತ್ತೇನೆ. ನನಗೆ ಸಂದ ಈ ಗೌರವ ಮನೆಯಲ್ಲಿ ಮಹಾಬಳಗಕ್ಕೆ ಮಾತ್ರವಲ್ಲದೆ ಎಲ್ಲ ಸಮಾಜದವರಿಗೂ ಸಂದ ಗೌರವವಾಗಿದೆ ಎಂದರು.
ಈ ವೇಳೆ ಹಿರಿಯರಾದ ಎಸ್.ಬಿ.ಕನ್ನೂರ, ಬಸವರಾಜ ನಾಲತವಾಡ, ಅಬ್ದುಲ್‌ರೆಹಮಾನ ಬಿದರಕುಂದಿ, ಎಸ್.ಎಸ್.ಕರಡ್ಡಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುದೇವ ಕಲಬುರ್ಗಿ, ದಿಗಂಬರ ಜೈನ ಸಮಾಜದ ಪ್ರಮುಖರಾದ ಬಾಬು ಗೋಗಿ, ಮಾಣಿಕಚಂದ ದಂಡಾವತಿ, ಅಭಿನಂದನ್ ಜೈನ್, ಕಸಾಪದ ಚಂದ್ರಶೇಖರ ಕಲಾಲ, ರಾಜು ಬಳ್ಳೊಳ್ಳಿ, ಎಸ್.ಎ.ಬೇವಿನಗಿಡದ, ಬಿ.ಎಸ್.ಪಾಟೀಲ ಸರೂರ, ಹುಸೇನ ಮುಲ್ಲಾ ಕಾಳಗಿ, ಸಿದ್ದಣ್ಣ ಹಡಲಗೇರಿ, ಡಾ| ಪ್ರಕಾಶ ನರಗುಂದ, ನೇತಾಜಿ ನಲವಡೆ, ಜಹಾಂಗೀರ ಮುಲ್ಲಾ, ಎಂ.ಎಂ.ಬೆಳಗಲ್ಲ, ಸಂಗಣ್ಣ ಮೇಲಿನಮನಿ, ಅಶೋಕ ವನಹಳ್ಳಿ, ಸರಸ್ವತಿ ಪೀರಾಪೂರ, ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕಿರುತೆರೆಯ ಹಾಸ್ಯಕಲಾವಿದ ಶ್ರೀಶೈಲ ಹೂಗಾರ ಕಾರ್ಯಕ್ರಮ ನಿರ್ವಹಿಸಿದರು.