ಸುಳ್ಳಿಗೆ ಮತ್ತೊಂದು ಹೆಸರು ಕುಮಾರಸ್ವಾಮಿ: ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿ
ನ್ಯಾಷನಲ್ ಹೆರಾಲ್ಡ್ ಗೆ ₹25 ಲಕ್ಷ ಕೊಟ್ಟಿದ್ದೇನೆ
ವಿಜಯಪುರ:”ಸುಳ್ಳಿಗೆ ಮತ್ತೊಂದು ಹೆಸರು ಕುಮಾರಸ್ವಾಮಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಿಡಿಕಾರಿದರು.
ವಿಜಯಪುರ ಜಿಲ್ಲೆ ಕೊಲ್ಹಾರದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಚಿನ್ನ ಕಳ್ಳಸಾಗಣೆಯ ರನ್ಯಾ ರಾವ್ ಪ್ರಕರಣದ ಮಾಹಿತಿಯನ್ನು ನೀವೇ ನೀಡಿದ್ದೀರ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಒಬ್ಬ ಮೆಂಟಲ್. ಅವರ ಮಾನಸಿಕ ಆರೋಗ್ಯ ಹದಗೆಟ್ಟಿರ ಬೇಕು. ತಲೆ ಕೆಟ್ಟು ಹೋಗಿದೆ” ಎಂದು ಜರಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಿಮ್ಮ ಹೆಸರು ಡಿ.ಕೆ.ಸುರೇಶ್ ಅವರ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಹೆಸರು ಇರುವುದರ ಬಗ್ಗೆ ಕೇಳಿದಾಗ, “ನಮ್ಮ ಪಕ್ಷ ನಡೆಸುವಂತಹ ಪತ್ರಿಕೆ. ಅದಕ್ಕೆ ನಾನು ಹಾಗೂ ಸುರೇಶ್ 25 ಲಕ್ಷ ದುಡ್ಡು ಕೊಟ್ಟಿದ್ದೇವೆ. ನಮ್ಮ ಟ್ರಸ್ಟ್ ನಿಂದಲೂ ದೇಣಿಗೆ ನೀಡಿದ್ದೇವೆ” ಎಂದರು.
ದೇಣಿಗೆ ನೀಡಿರುವುದರಿಂದ ನಿಮಗೆ ತೊಂದರೆಯಾಗುತ್ತದೆಯೇ ಎಂದಾಗ, “ನಾವು ದುಡಿದಂತಹ ಆಸ್ತಿಯಿಂದ ರಾಜರೋಷವಾಗಿ ಹಣ ನೀಡಿದ್ದೇವೆ. ನಾವು ಕದ್ದುಮುಚ್ಚಿ ಹಣ ನೀಡಿಲ್ಲ” ಎಂದು ಹೇಳಿದರು.