ಮುದ್ದೇಬಿಹಾಳ: ಅಹಿಲ್ಯಾದೇವಿ ಹೋಳ್ಕರ್ ಗ್ರಾಮೀಣಾಭಿವೃದ್ದಿ ಮತ್ತು ಶೈಕ್ಷಣಿಕ ಸಂಸ್ಥೆಯಡಿ ನಡೆಯುತ್ತಿರುವ ಅಭ್ಯುದಯ ಸೈನ್ಸ್ ಪಿಯು ಕಾಲೇಜಿನಲ್ಲಿ ಏ.೧೦ ರಂದು ಬೆಳಿಗ್ಗೆ ೧೧-೩೦ ಗಂಟೆಗೆ ಅಹಿಲ್ಯಾದೇವಿ ಹೋಳ್ಕರ್ ಆವಾರ್ಡ-೨೦೨೫ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಲಾಗಿದೆ. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ ಹೊಂದಿರುವ ಬಡ ಕುಟುಂಬದ ಪಾಲಕರ ಮಕ್ಕಳು ಮಾತ್ರ ಈ ಪರೀಕ್ಷೆಯಲ್ಲಿ ಭಾಗವಹಿಸಿ ಪಿಯುಸಿ ವಿಜ್ಞಾನದ ಎರಡು ವರ್ಷದ ಸಂಪೂರ್ಣ ಉಚಿತ ಶಿಕ್ಷಣಕ್ಕೆ ಆಯ್ಕೆಯಾಗುವ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ತಿಳಿಸಿದರು.
ಕಾಲೇಜು ಆವರಣದಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ೨೦೧೭ರಲ್ಲಿ ಪ್ರಾರಂಭಿಸಿದ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಗ್ರಾಮೀಣ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ. ಇದುವರೆಗೆ ಅಂದಾಜು ೪೦೦ಕ್ಕೂ ಹೆಚ್ಚು ಬಡ ಕುಟುಂಬದ ಪ್ರತಿಭಾವಂತ ಮಕ್ಕಳು ಉಚಿತ ಶಿಕ್ಷಣದ ಸೌಲಭ್ಯ ಪಡೆದುಕೊಂಡಿದ್ದಾರೆ. ಇದು ನಮಗೆ ಸಂತೃಪ್ತಿ ತಂದುಕೊಟ್ಟಿದೆ ಎಂದರು.
ಫೆಬ್ರವರಿ ೨ರಂದು ಎಲ್ಲ ವರ್ಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಶಿಷ್ಯವೇತನದ ಪರೀಕ್ಷೆಯಲ್ಲಿ ೧೩೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ೨೦ ಪ್ರತಿಭಾವಂತರನ್ನು ಎರಡು ವರ್ಷಗಳ ಸಂಪೂರ್ಣ ಉಚಿತ ಶಿಕ್ಷಣಕ್ಕೆ ಆಯ್ಕೆ ಮಾಡಲಾಗಿತ್ತು. ಇದೀಗ ಕೇವಲ ಬಡಮಕ್ಕಳಿಗೆ ಅನುಕೂಲ ಮಾಡಿಕೊಡಲು ಈ ಪರೀಕ್ಷೆ ಏರ್ಪಡಿಸಲಾಗಿದೆ. ಬಡ ಕುಟುಂಬದ ಪಾಲಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ನಮ್ಮ ಸಂಸ್ಥೆಯಡಿ ಕೋಳೂರು, ಅಡವಿ ಹುಲಗಬಾಳ ಮತ್ತು ಮುದ್ದೇಬಿಹಾಳದಲ್ಲಿರುವ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲೂ ಪ್ರಾಥಮಿಕ, ಪ್ರೌಢ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉಚಿತ ಶಿಕ್ಷಣ ಸೌಲಭ್ಯ ಕಲ್ಪಿಸಿದ್ದೇವೆ. ಬಡವರ ಮಕ್ಕಳು ಬೆಳೆಯಬೇಕು ಅನ್ನೋದು ನಮ್ಮ ಅಪೇಕ್ಷೆಯಾಗಿದೆ. ಬೇರೆ ಸಂಸ್ಥೆಯವರು ಕೋಟಿ ರೂಗಳ ಶಿಷ್ಯವೇತನ ಸೌಲಭ್ಯ ಒದಗಿಸಿದರೂ ಅಲ್ಲಿ ಜಾಣರನ್ನು ಮಾತ್ರ ಜಾಣರನ್ನಾಗಿ ಮಾಡುತ್ತಾರೆ. ನಮ್ಮಲ್ಲಿ ಜಾಣರಲ್ಲದವರನ್ನೂ ಜಾಣರನ್ನಾಗಿಸಿ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಪ್ರತಿಭಾವಂತ ಉಪನ್ಯಾಸಕರು ಶ್ರಮಿಸುತ್ತಿದ್ದಾರೆ ಎಂದರು.
ಸAಸ್ಥೆಯ ನಿರ್ದೇಶಕ ಕಿರಣ್ ಮದರಿ, ಆಡಳಿತಾಧಿಕಾರಿ ಬಿ.ಜಿ.ಬಿರಾದಾರ, ಲೆಕ್ಕ ವ್ಯವಸ್ಥಾಪಕ ಬಸವರಾಜ ಬಿಜ್ಜೂರ, ಪ್ರಾಚಾರ್ಯ ಪಿಯು ಎಂ.ಎಂ.ಧನ್ನೂರ, ಪದವಿ ಪ್ರಾಚಾರ್ಯ ಆರ್.ಎಸ್.ಜಡಗಿ, ಉಪನ್ಯಾಸಕ ವೀರೇಶ ಹೂಲಿಕೇರಿ ಇದ್ದರು.
ಬೇಸಿಗೆಯಲ್ಲಿ ಉಚಿತ ತರಬೇತಿ:ಏಪ್ರೀಲ್ ೧ ರಿಂದ ಮುದ್ದೇಬಿಹಾಳ, ಅಡವಿ ಹುಲಗಬಾಳ, ಕೋಳೂರು ಭಾಗದಲ್ಲಿರುವ ನಮ್ಮ ಸಂಸ್ಥೆಯ ಅಭ್ಯುದಯ ಇಂಟರ್‌ನ್ಯಾಶನಲ್ ಸ್ಕೂಲ್‌ಗಳಲ್ಲಿ ೪೫ ದಿನಗಳ ಉಚಿತ ಬೇಸಿಗೆ ತರಬೇತಿ ಶಿಬಿರ ಪ್ರಾರಂಭಿಸಲಾಗಿದೆ. ಸರ್ಕಾರಿ ಅಥವಾ ಖಾಸಗಿ ಶಾಲೆಗಳ ಮಕ್ಕಳು ಪಾಲ್ಗೊಳ್ಳಲು ಅವಕಾಶವಿದೆ. ನಮ್ಮದೇ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ. ಅಡವಿ ಹುಲಗಬಾಳ, ಕೋಳೂರು ಶಾಲೆಗಳಲ್ಲಿ ಈಗಾಗಲೇ ತಲಾ ೧೫೦೦, ಮುದ್ದೇಬಿಹಾಳದ ಶಾಲೆಯಲ್ಲಿ ೫೦೦ ವಿದ್ಯಾರ್ಥಿಗಳು ಉಚಿತ ತರಬೇತಿಗೆ ಹೆಸರು ನೋಂದಾಯಿಸಿಕೊಂಡು ಹಾಜರಾಗುತ್ತಿದ್ದಾರೆ. ಕನ್ನಡ, ಇಂಗ್ಲೀಷ್, ವಿಜ್ಞಾನ, ಗಣಿತ ವಿಷಯಗಳಲ್ಲಿ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕೂಲಿಕಾರ್ಮಿಕರ, ಅನಾಥರ, ಬಡವರ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮದರಿ ತಿಳಿಸಿದರು.
ಪರೀಕ್ಷೆಗೆ ನೋಂದಣಿ: ಏ೧೦ರಂದು ನಡೆಯಲಿರುವ ಪರೀಕ್ಷೆಗೆ ವಿದ್ಯಾರ್ಥಿಯ ಹೆಸರು, ವರ್ಗ, ಶಾಲೆಯ ಹೆಸರು, ವಿಳಾಸ, ಮೋಬೈಲ್ ಸಂಖ್ಯೆ ಮಾದರಿಯಲ್ಲಿ ಸಂದೇಶ ಟೈಪ್ ಮಾಡಿ ಮೋ:೯೬೮೬೨೬೪೭೧೦ ಅಥವಾ ೯೬೬೩೦೦೭೬೧೪ ಸಂಖ್ಯೆಗೆ ಎಸ್‌ಎಂಎಸ್ ಅಥವಾ ವಾಟ್ಸ್ಪ್ ಸಂದೇಶ ಕಳಿಸಿ ನೋಂದಣಿ ಮಾಡಿಕೊಳ್ಳಬಹುದು. ಪರೀಕ್ಷಾ ದಿನದಂದೇ ಹೆಸರು ನೋಂದಾಯಿಸಲೂ ಅವಕಾಶವಿದೆ. ಇಂಗ್ಲೀಷ, ಗಣಿತ, ವಿಜ್ಞಾನ ವಿಷಯಗಳ ಮೇಲೆ ೬೦ ಪ್ರಶ್ನೆಗಳ, ೬೦ ನಿಮಿಷ ಕಾಲಾವಧಿಯ ಬಹು ಆಯ್ಕೆ ಮಾದರಿಯ ಪ್ರಶ್ನೆಪತ್ರಿಕೆ ಇರಲಿದೆ. ಪರೀಕ್ಷಾರ್ಥಿಗಳು ಆಧಾರ ಕಾರ್ಡ, ಎಸ್ಸೆಸ್ಸೆಲ್ಸಿ ಹಾಲ್‌ಟಿಕೇಟ್ ತರುವುದು ಕಡ್ಡಾಯ. ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮದವರು ಪಾಲ್ಗೊಳ್ಳಬಹುದು.