ಬಸವನ ಬಾಗೇವಾಡಿ : ತಾಲೂಕು ಕುದುರಿ ಸಾಲವಾಡಗಿ ಗ್ರಾಮದ ದ್ವಂಸಗೊಳಿಸಲ್ಪಟ್ಟ ಬಡ ಕುಟುಂಬಗಳಿಗೆ ಆಮ್ ಆದ್ಮಿ ಪಾರ್ಟಿ ಸಂಪೂರ್ಣ ಬೆಂಬಲ – ತಕ್ಷಣ ಪರಿಹಾರ, ನೂತನ ಮನೆಗಳ ನಿರ್ಮಾಣಕ್ಕೆ ಒತ್ತಡ. ರಸ್ತೆ ಅಗಲೀಕರಣದ ನೆಪದಲ್ಲಿ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದಲ್ಲಿ ಸ್ವಂತ ಮನೆಗಳು, ಅಂಗಡಿಗಳನ್ನು ದ್ವಂಸಗೊಳಿಸಿ ಬಡ ಕುಟುಂಬಗಳನ್ನು ಬೀದಿಗೆ ತಳ್ಳಿದ ರಾಜ್ಯ ಸರ್ಕಾರ, ಜಿಲ್ಲಾ ಆಡಳಿತ ಮತ್ತು ಗ್ರಾಮ ಪಂಚಾಯಿತಿ ಪಿ.ಡಿ.ಓ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಹಾಗೂ ದೇವರಹಿಪ್ಪರಗಿ ಶಾಸಕರ ವಿರುದ್ಧ ನಡೆಯುತ್ತಿರುವ ಅನಿರ್ದಿಷ್ಟಕಾಲ ಧರಣಿ-ಸತ್ಯಾಗ್ರಹ ಸ್ಥಳಕ್ಕೆ ಆಮ್ ಆದ್ಮಿ ಪಾರ್ಟಿ (ಆಪ್) ವಿಜಯಪುರ ಜಿಲ್ಲಾಧ್ಯಕ್ಷರಾದ ಭೋಗೇಶ್ ಸೋಲಾಪುರ್, ಪಕ್ಷದ ಜಿಲ್ಲಾ ಮುಖಂಡರು, ತಾಲೂಕು ಅಧ್ಯಕ್ಷರು ಹಾಗೂ ಕಾರ್ಯಕರ್ತರು ಇಂದು ಭೇಟಿ ನೀಡಿ, ಪ್ರತಿಭಟಿಸುತ್ತಿರುವ ಗ್ರಾಮಸ್ಥರಿಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.
ಗ್ರಾಮ ಪಂಚಾಯಿತಿ ಪಿ.ಡಿ.ಓ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪಿ.ಡಬ್ಲು.ಡಿ ಅಧಿಕಾರಿಗಳು ಸುಮಾರು ೨ ತಿಂಗಳ ಹಿಂದೆ ಆರಂಭವಾದ ರಸ್ತೆ ಸುಧಾರಣೆ ಕಾರ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಮುಂಗಾರು ನೋಟೀಸ್ ಇಲ್ಲದೆಯೇ ಬಡ ಕುಟುಂಬಗಳ ೧೪೩ ಕ್ಕೂ ಹೆಚ್ಚು ಮನೆಗಳನ್ನು ದ್ವಂಸಗೊಳಿಸಿ, ಅನಾಥರನ್ನಾಗಿ ಮಾಡಿದ್ದಾರೆ. ಇದು ಸಂವಿಧಾನದ ಮೂಲಭೂತ ಹಕ್ಕುಗಳನ್ನು, ಜನರ ಜೀವನ ಹಕ್ಕನ್ನು ಉಲ್ಲಂಘಿಸುವ ಕೃತ್ಯವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷರಾದ ಭೋಗೇಶ್ ಸೋಲಾಪುರ್ ಖಂಡಿಸಿದರು.
ಆಪ್ ವಿಜಯಪುರ ಜಿಲ್ಲಾಧ್ಯಕ್ಷರಾದ ಭೋಗೇಶ್ ಸೋಲಾಪುರ್ ಮಾತನಾಡಿ “ಈ ದ್ವಂಸ ಕೃತ್ಯವು ಸ್ಥಳೀಯ ಶಾಸಕರ ಹಾಗೂ ಕಾಂಗ್ರೆಸ್ ಸರ್ಕಾರದ ವೈಫಲ್ಯದ ಸಂಕೇತ. ಬಡವರ ಮೇಲೆ ದೌರ್ಜನ್ಯ ಮಾಡುವ ಬದಲು ಅವರಿಗೆ ನ್ಯಾಯ ಒದಗಿಸುವುದು ಶಾಸಕರ, ಜಿಲ್ಲಾ ಆಡಳಿತ ಹಾಗೂ ಸರ್ಕಾರದ ಕರ್ತವ್ಯ.
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಆಪ್ ಬಡತನ ಮತ್ತು ದಾರಿದ್ರ್ಯ ನಿರ್ಮೂಲನಕ್ಕಾಗಿ ಕೆಲಸ ಮಾಡಿದಂತೆಯೇ, ಕರ್ನಾಟಕದಲ್ಲೂ ಆ ಮಾದರಿ ಜಾರಿಗೊಳಿಸುತ್ತೇವೆ. ಈ ಕುಟುಂಬಗಳಿಗೆ ತಕ್ಷಣ ೧೦ ಲಕ್ಷ ರೂಪಾಯಿ ಪರಿಹಾರ, ನೂತನ ಮನೆಗಳ ನಿರ್ಮಾಣ ಮತ್ತು ದೋಷಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಹಾಗೂ ದಂಡನೇ ಸಿಂಪಡಿಸಲು ಸರ್ಕಾರ ಆದೇಶ ನೀಡಲಿ” ಎಂದು ಹೇಳಿದರು.
ಆಮ್ ಆದ್ಮಿ ಪಕ್ಷ ಈ ಹೋರಾಟದಲ್ಲಿ ಮುಂಚೂಣದಲ್ಲಿದೆ. ತಕ್ಷಣ ಪರಿಹಾರ ನೀಡದಿದ್ದರೆ ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡಬೇಕಾಗಿ ಸಂದರ್ಭ ಬರಬಹುದು” ಎಂದು ಜಿಲ್ಲಾಧ್ಯಕ್ಷರು ಕಿಡಿಕಾರಿದರು.
ಪಕ್ಷದ ಜಿಲ್ಲಾ ಮಾಧ್ಯಮ ಉಸ್ತುವಾರಿ ಸಂಜು ಶೆಟಗಾರ ಮಾತನಾಡಿ”ದ್ವಂಸಗೊಳಿಸಲ್ಪಟ್ಟ ಕುಟುಂಬಗಳಿಗೆ ತಕ್ಷಣ ಸಾಂತ್ವನಾರ್ಥಕ ಪರಿಹಾರ ನೀಡಿ.ಉಚಿತ ಜಾಗ ನೀಡಿ ನೂತನ ಮನೆಗಳ ನಿರ್ಮಾಣಕ್ಕೆ ೫ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ. ದ್ವಂಸ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳ ವಿರುದ್ಧ ಎಫ್.ಐ. ಆರ್ ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ಮುದ್ದೇಬಿಹಾಳ ತಾಲೂಕು ಅಧ್ಯಕ್ಷರಾದ ಮೆಹಬೂಬ್ ಹಡಲಗೇರಿ ಮಾತನಾಡಿ “ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಪರ್ಯಾಯ ವ್ಯವಸ್ಥೆ ತಕ್ಷಣ ಮಾಡಬೇಕು.
ಆಮ್ ಆದ್ಮಿ ಪಾರ್ಟಿ ಈ ಹೋರಾಟವನ್ನು ಜನರೊಂದಿಗೆ ನಡೆಸುತ್ತದೆ. ಸರ್ಕಾರ ಒತ್ತಡಕ್ಕೆ ಒಳಗಾಗದಿದ್ದರೆ ಜಿಲ್ಲಾಧ್ಯಂತ ಸೇರಿದಂತೆ ಧರಣಿಗಳನ್ನು ಆಯೋಜಿಸುತ್ತೇವೆ ಎಂದು ಮೆಹಬೂಬ್ ಹಡಲಗೇರಿ ತಿಳಿಸಿದರು.
ದೇವರಹಿಪ್ಪರಗಿ ತಾಲೂಕು ಅಧ್ಯಕ್ಷರಾದ ಸೋಮು ಹಟ್ಟಿ ಮಾತನಾಡಿ ” ನಮ್ಮೂರು ಅವರೇ ಆದ ಶಾಸಕರು ಮಾನವೀಯತೆ ಮರೆತು ತಪ್ಪು ಕೆಲಸ ಮಾಡಿದ್ದಾರೆ. ತಕ್ಷಣ ತಪ್ಪನ್ನು ಸರಿಪಡಿಸಿ ನ್ಯಾಯ ಒದಗಿಸಲು ಸಕಾರಾತ್ಮಕವಾಗಿ ಪ್ರಯತ್ನ ಮಾಡಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅವಿನಾಶ್ ಐಹೊಳೆ, ಬಸವನ ಬಾಗೇವಾಡಿ ಅಧ್ಯಕ್ಷರಾದ ಸಂತೋಷ್ ಚಲವಾದಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.



















