ಲಿಂಗಸೂಗೂರು: ಮಳೆ ಬಂತೆದರೆ ಸಾಕು ಆ ಗ್ರಾಮದ ಮುಖ್ಯ ರಸ್ತೆಯಲ್ಲಿ ಹಗಲಿರುಳು ನೀರು ಹರಿಯುತ್ತದೆ. ಕಳೆದ ಆರೇಳು ದಿನಗಳಿಂದ ಮಳೆಯಾಗುತ್ತಿದ್ದು, ಕರೆಯ ನೀರು ಹರಿದು ಜನರಿಗೆ ಬೇರೆ ಬೇರೆ ಸ್ಥಳಗಳಿಗೆ ತೆರಳಲು ಆಗದೆ, ಇತ್ತ ರೈತರು ಜಮೀನುಗಳಿಗೆ ತೆರಳಲಾಗದೆ ಆತಂಕದಲ್ಲೆ ಕಾಲ ಕಳೆಯುತ್ತಿದ್ದಾರೆ. ಇನ್ನು ಶಾಲಾ ವಿದ್ಯಾರ್ಥಿಗಳ ಪಾಡಂತು ಹೇಳತೀರದಾಗಿದೆ.
ಹೌದು ಲಿಂಗಸೂಗೂರು ತಾಲೂಕಿನ ಬೋಗಾಪುರ ಗ್ರಾಮದ ಕೆರೆಯ ನೀರು ಹೆಚ್ಚಿದ್ದರಿಂದ ಕರೆಯ ನೀರು ಗ್ರಾಮದ ಮುಖ್ಯ ರಸ್ತೆಯಲ್ಲಿ ನಾಲ್ಕೈದು ಅಡಿ ನೀರು ಹರಿಯುತ್ತಿದೆ. ಇದರಿಂದಾಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅಲ್ಲದೆ ಮುಖ್ಯ ರಸ್ತೆಯನ್ನು ದಾಟಬೇಕಾದರೆ ಸ್ಥಳೀಯರು ಟ್ರಾಕ್ಟರ್ಗಳ ಸಹಾಯದಿಂದ ರಸ್ತೆ ದಾಟುವ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ಅಕ್ಕ ಪಕ್ಕದ ಜಮೀನುಗಳಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಸಾರ್ವಜನಿಕರು ಬೊಮ್ಮನಾಳ ಮಾರ್ಗವಾಗಿ ಮುದಗಲ್, ಲಿಂಗಸೂಗೂರು ಪಟ್ಟಣಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಮುಖ್ಯ ರಸ್ತೆ ಇಳಿಜಾರಿನಲ್ಲಿರುದರಿಂದ ಕೆರೆಯ ನೀರು ಹರಿದು ರಸ್ತೆ ಹಾಳಾಗಿ ಹೋಗಿದೆ. ಇಷ್ಟಾದರೂ ಕೂಡಾ ಯಾವೊಬ್ಬ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಇನ್ನಾದ್ರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆಯನ್ನು ದುರಸ್ಥಿಗೊಳಿಸಿ ಸಾರ್ವಜನಿಕರಿಗೆ ಅನುಕೂಲಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುದಗಲ್ ಘಟಕದ ಅಧ್ಯಕ್ಷ ಲಕ್ಷ್ಮಣ್ಣ ಮುಕ್ಕಣ್ಣವರ್, ಹುಲಗಪ್ಪ ಬೋಗಾಪೂರ, ಬಾಳಪ್ಪ ಕೊಮನೂರು, ಅಮರಪ್ಪ ಕನಕೇರಿ ಆಗ್ರಹಿಸಿದ್ದಾರೆ.