ಮಸ್ಕಿ : ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಗಚ್ಚಿನಮಠದಿಂದ ಕನಕ ವೃತ್ತ, ದೇವರ ಕಟ್ಟೆ, ಕಲೀಲ್ ವೃತ್ತ, ಅಂಬೇಡ್ಕರ್ ಪ್ರತಿಮೆ ಸೇರಿದ ಪ್ರತಿಭಟನಕಾರರು ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ಪಕ್ಷದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿ ವಿಕೃತಿ ಮೆರೆಯಲಾಗಿದೆ. ಹತ್ಯೆ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ತಪ್ಪಿತಸ್ಥರನ್ನು ಗಲ್ಲಿಗೇರಿಸಲು ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಹಿಂದೂ ಯುವಕರ ಹತ್ಯೆಯಾದರೆ ಕಾಂಗ್ರೆಸ್ ತುಟಿ ಬಿಚ್ಚಲ್ಲ. ಕಾಂಗ್ರೆಸ್ ಬೆಂಬಲಿತ ಬುದ್ಧಿ ಜೀವಿಗಳು ದೇಶಕ್ಕೆ ಮಾರಕವಾಗಿದ್ದಾರೆ. ಭಾವೈಕ್ಯ ಮನೋಭಾವದಿಂದ ಇರುವವರಿಗೆ ಸಹಿಷ್ಣುತೆ ಪಾಠ ಹೇಳುತ್ತಾರೆ. ಕ್ರೂರತೆ, ಮತಾಂಧತೆ ಬೆಳೆಸಿಕೊಂಡವರಿಗೆ ಏನೂ ಹೇಳುವುದಿಲ್ಲ’ ಎಂದು ಆರೋಪಿಸಿದರು.
ಬಿಜೆಪಿ ಪಕ್ಷದ ಮುಖಂಡ ಮೌನೇಶ ನಾಯಕ್ ಮಾತನಾಡಿ,‘ರಾಜಸ್ಥಾನದಲ್ಲಿ ಕನ್ಹಯ್ಯಲಾಲ್ ಅವರು ಟೈಲರ್ ವೃತ್ತಿ ನಡೆಸುತ್ತಿದ್ದರು. ನೂಪರ್ ಶರ್ಮಾ ಅವರ ಭಾವಚಿತ್ರವನ್ನು ವಾಟ್ಸಾಪ್‌ಗೆ ಹಾಕಿಕೊಂಡಿದ್ದರು. ಅದನ್ನು ವಿರೋಧಿಸಿ ಕೆಲ ದಿನಗಳಿಂದ ಅವರಿಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ಕ್ರಮ ಜರುಗಿಸಿಲ್ಲ. ರಾಜಸ್ಥಾನ ಸರ್ಕಾರದ ನಿರ್ಲಕ್ಷದಿಂದಾಗಿ ಹತ್ಯೆ ನಡೆದಿದೆ’ ಎಂದು ದೂರಿದರು.
ಕನ್ಹಯ್ಯಲಾಲ್ ಅವರ ಅಂಗಡಿಗೆ ಇಬ್ಬರು ವ್ಯಾಪಾರಿಗಳಂತೆ ಬಂದು, ಹತ್ಯೆ ಮಾಡಿದ್ದಾರೆ. ಹತ್ಯೆ ನಂತರ ಮಾರಾಕಾಸ್ತ್ರ ತೋರಿಸಿ, ಪ್ರಧಾನಿ ಮೋದಿ ಹಾಗೂ ಒಂದು ಧರ್ಮದ ಯುವಕರಿಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೋ ಹರಿಬಿಟ್ಟಿದ್ದಾರೆ. ಅದನ್ನು ಸಹಿಸಲು ಸಾಧ್ಯವಿಲ್ಲ. ರಾಷ್ಟ್ರಪತಿ ಅವರು ರಾಜಸ್ಥಾನದ ಸರ್ಕಾರ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.