ಅಫಜಲಪುರ: ಭಾರತದಂತ ಬಹು ಸಂಸ್ಕೃತಿ, ಬಹು ಧರ್ಮಗಳ ದೇಶದಲ್ಲಿ ಎಲ್ಲರನ್ನು ಒಂದಾಗಿ ಕಾಣುವ ಅಂಬೇಡ್ಕರ್ ಅವರ ಸಂವಿಧಾನವೇ ಸರ್ವಶ್ರೇಷ್ಠವೆಂದು ಡಾ. ಅಭಿನವ ಚನ್ನಮಲ್ಲ ಶಿವಾಚಾರ್ಯರು ಹೇಳಿದರು.
ಅವರು ತಾಲೂಕಿನ ಬಡದಾಳ ಗ್ರಾಮದ ಬುದ್ದ ನಗರದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರ ೧೩೧ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಜಗತ್ತಿನಲ್ಲಿ ಅನೇಕ ದೇಶಗಳು ತಮ್ಮದೇ ಆದ ಕಾನೂನುಗಳು, ಚೌಕಟ್ಟುಗಳನ್ನು ಇಟ್ಟುಕೊಂಡು ನಡೆದಿವೆ. ಆದರೆ ಹಲವಾರು ಧರ್ಮ, ಜಾತಿ, ಮತ-ಪಂಥಗಳು ಇದ್ದರು, ಬಹುಸಂಸ್ಕೃತಿ ಇದ್ದರೂ ನಾವೆಲ್ಲರೂ ಭಾರತೀಯರೆಂಬ ಹೆಮ್ಮೆ ಬರುವಂತೆ ಎಲ್ಲರನ್ನು ಒಂದಾಗಿಸಿದ್ದು ನಮ್ಮ ಸಂವಿಧಾನ. ಇಂತಹ ಸಂವಿಧಾನ ಕೊಟ್ಟ ಬಾಬಾ ಸಾಹೇಬರನ್ನು ಭಾರತೀಯರೆಲ್ಲ ನಿತ್ಯ ಸ್ಮರಿಸಬೇಕು. ಅವರಿಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯದ ಮಾತು. ನಮ್ಮ ಶ್ರೇಷ್ಠ ಸಂವಿಧಾನಕ್ಕೆ ಸಮವಾದ ಇನ್ನೊಂದು ಏನು ಇಲ್ಲ ಎಂದ ಅವರು ದಲಿತ ಕೇರಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಮ್ಮ ಮಠದಿಂದ ಶಿಕ್ಷಣ ನೀಡಲಾಗುತ್ತದೆ. ಈ ಕುರಿತು ಕಳೆದ ಬಾರಿಯ ಜಯಂತಿಯಲ್ಲೇ ನಾನು ಘೋಷಣೆ ಮಾಡಿದ್ದೆ, ಆದರೆ ಯಾರು ಬಂದು ನಮ್ಮ ಶಿಕ್ಷಣ ಸಂಸ್ಥೆಗೆ ಸಂಪರ್ಕಿಸಿಲ್ಲ. ಈ ಬಾರಿಯಾದರೂ ಸಂಪರ್ಕಿಸಿದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಮ್ಮ ಮಠದಿಂದ ಶಿಕ್ಷಣಕ್ಕೆ ಸಹಾಯ ಮಾಡಲಾಗುತ್ತದೆ ಎಂದರು.
ಪ್ರೋ. ಡಾ. ಪಂಡಿತ ಬಿ.ಕೆ, ಶಿಕ್ಷಕ ಮಹೇಶ ಅಂಜುಟಗಿ ಉಪನ್ಯಾಸ ನೀಡಿ ಮಾತನಾಡುತ್ತಾ ಹೆತ್ತ ತಾಯಿ ತನ್ನ ಮಕ್ಕಳನ್ನು ಕಾಳಜಿಯಿಂದ ಸಲುಹಿದಂತೆ ಅಂಬೇಡ್ಕರ್ ಕೂಡ ತಾಯಿ ಗುಣದವರು, ಅವರಿಗೆ ಈ ಸಮಾಜ ಎಷ್ಟು ಹಿಂಸೆ ಕೊಟ್ಟರು ಎಲ್ಲರನ್ನು ಕ್ಷಮಿಸಿ ಸಂವಿಧಾನದ ಮೂಲಕ ಸರ್ವರು ಸಮಾನರು, ಎಲ್ಲರಿಗೂ ಒಂದೇ ರೀತಿಯ ಹಕ್ಕು ಕರ್ತವ್ಯಗಳನ್ನು ಕಲ್ಪಿಸುವ ಮೂಲಕ ತಾಯಿತನ ಮೇರೆದಿದ್ದಾರೆ. ಆದರೆ ಅವರನ್ನು ಈಗಲೂ ಕೇವಲ ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ನಿಜಕ್ಕೂ ಸರಿಯಲ್ಲ. ಅವರ ಚಿಂತನೆಗಳನ್ನು ಜಗತ್ತು ಒಪ್ಪಿಕೊಂಡಿರುವಾಗ ನಾವಿನ್ನು ಜಾತಿಯಿಂದ ಅವರನ್ನು ಗುರುತಿಸುವ ಕೀಳುತನ ಬಿಡಬೇಕು ಎಂದ ಅವರು ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ತಲೆ ಮೇಲಿಟ್ಟು ಮೆರವಣಿಗೆ ಮಾಡಿ ಡಿಜೆ ಹಚ್ಚಿ ಕುಣಿದಂತೆ ಅವರ ಚಿಂತನೆಗಳನ್ನು ತಲೆಯಲ್ಲಿ ಹಾಕಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ ಎಂದು ಕರೆ ನೀಡಿದರು.
ಮಾಶಾಳದ ಕೇದಾರ ಶಿವಾಚಾರ್ಯರು ಮಾತನಾಡುತ್ತಾ ನಾವು ಎಲ್ಲರಂತೆ ಬಾಬಾಸಾಹೇಬರಿಗೆ ಗೌರವ ಸೂಚಿಸುತ್ತೇವೆ. ನಾವು ಕೂಡ ಅದೇ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲೇ ಧರ್ಮ ಕಾರ್ಯಗಳನ್ನು ಮಾಡುತ್ತಿದ್ದೇವೆ. ಆದರೆ ಅನೇಕರು ಮಠಾಧೀಶರನ್ನು ಅಂಬೇಡ್ಕರ್ ವಿರೋಧಿಗಳೆಂಬಂತೆ ತೋರಿಸುತ್ತಾರೆ. ಆದರೆ ಅಸಲಿಗೆ ನಾವು ಕೂಡ ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರಭಾವಿತರಾದವರಾಗಿದ್ದೇವೆ. ನಮ್ಮನ್ನು ಕೂಡ ಅಂಬೇಡ್ಕರ್ ಅವರಂತೆ ಜಾತಿಗಳಿಗೆ ಸಿಮೀತಗೊಳಿಸಲಾಗುತ್ತಿದೆ. ಇದರಿಂದ ನಮಗೆಲ್ಲ ಬಹಳ ಬೇಜಾರಾಗುತ್ತದೆ. ಮಠಾಧೀಶರೆಂದು ಜಾತಿ ಮಾಡುವುದಿಲ್ಲ. ಈ ದೇಶದಲ್ಲಿ ಯಾರಿಗೆ ತಲೆ ಬಾಗುತ್ತಾರೋ ಇಲ್ಲವೋ ಗೊತ್ತಿಲ್ಲ, ಸಂವಿಧಾನಕ್ಕಂತು ತಲೆ ಬಾಗಲೇಬೇಕು. ಇದಕ್ಕೆ ನಾವು ಹೊರತಾಗಿಲ್ಲ ಎಂದ ಅವರು ನಾವು ಕೂಡ ಸಂವಿಧಾನದ ಆಶಯದಂತೆ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳುತ್ತೇವೆ. ಭಾರತೀಯರಿಗೆಲ್ಲ ಸಂವಿಧಾನವೇ ಸರ್ವಶ್ರೇಷ್ಠವಾಗಿದೆ. ದಲಿತ ಸಮುದಾಯದ ಯುವಕರು ದುಶ್ಚಟಗಳಿಂದ ದೂರವಾಗಿ ಶಿಕ್ಷಣವನ್ನು ಕಲಿತು ಬದುಕನ್ನು ಸುಧಾರಿಸಿಕೊಳ್ಳಬೇಕು. ಹೀಗಾದಾಗ ಮಾತ್ರ ಅಂಬೇಡ್ಕರ್ ಅವರ ಜಯಂತಿ ಮಾಡಿದ್ದಕ್ಕೆ ಸಾರ್ಥಕವಾಗಲಿದೆ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಅಮೃತ ಮಾತಾರಿ, ಸದಸ್ಯರಾದ ಖಾಜಪ್ಪ ಸಿಂಗೆ, ರೂಪೇಶ ಪ್ಯಾಟಿ, ಶ್ರೀಶೈಲ್ ಬಿಜಾಪುರೆ, ನಾಗೇಶ ಭತ್ತಾ, ಭಾಗಣ್ಣ ಚಾಂಬಾರ, ಮರೇಪ್ಪ ಸಿಂಗೆ, ಗಿರೀಶ ಉಡಗಿ, ಉದ್ಯಮಿ ಡಾ. ಅಶೋಕ ಗುತ್ತೇದಾರ, ಸಿದ್ದಯ್ಯ ಗುತ್ತೇದಾರ, ಅರವಿಂದ ದೊಡ್ಮನಿ, ರಾಜು ಆರೇಕರ, ಮಾಂತು ಬಳೂಂಡಗಿ, ಮಹಾಂತೇಶ ಬಡದಾಳ, ಚಿದಾನಂದ ಬಸರಿಗಿಡ, ಸಿದ್ದಾರ್ಥ ಬಸರಿಗಿಡ, ಮಡಿವಾಳ ಗಂಗಾ, ಚಂದ್ರಕಾಂತ ಗುತ್ತೇದಾರ, ರಾಚಯ್ಯ ಸ್ವಾಮಿ, ಗುರುರಾಜ ಅತನೂರೆ, ಕಲ್ಯಾಣಿ ನಾಟಿಕಾರ, ಸಿದ್ದು ದಿಕ್ಸಂಗಿ, ರಾಮು ದತ್ತು, ಭೀಮು ತೆಲ್ಲೂರ, ಸಿದ್ದಾರಾಮ ವಾಘ್ಮೋರೆ, ಶೆಟ್ಟೆಪ್ಪ ಇಮ್ಮನ್, ರವಿ, ಬಸು, ದಿಲೀಪ, ವಿನೋದ ಸೇರಿದಂತೆ ಅನೇಕರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.