ಅಫಜಲಪುರ: ಇಂದು ಮಿಸಲಾತಿ ಇದ್ದರೂ ಕೂಡ ಮಾದಿಗ ಸಮಾಜ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಇದಕ್ಕೆ ಕಾರಣ ಶಿಕ್ಷಣದ ಕೊರತೆ ಹೀಗಾಗಿ ಮಾದಿಗ ಸಮಾಜದವರು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಶಾಸಕ ಎಂ.ವೈ ಪಾಟೀಲ್ ಕರೆ ನೀಡಿದರು.
ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ ಹಾಲನಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ ೧೧೫ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಒಬ್ಬ ವ್ಯಕ್ತಿಯನ್ನು ದೇಶದ ಜನರೆಲ್ಲ ಆರಾಧಿಸಬೇಕೆಂದರೆ ಅವರಲ್ಲಿನ ಸಿದ್ದಾಂತಗಳು ಎಲ್ಲರಿಗೂ ಇಷ್ಟವಾಗುವಂತಿರಬೇಕು. ಅಂತವರ ಸಾಲಿನಲ್ಲಿ ಡಾ. ಬಾಬುಜೀ ನಿಲ್ಲುತ್ತಾರೆ. ಹೀಗಾಗಿ ಅವರ ೧೧೫ ನೇ ಜಯಂತಿಯನ್ನು ಎಲ್ಲ ಸಮುದಾಯದ ಜನ ಸೇರಿ ಆಚರಿಸುತ್ತಿದ್ದೇವೆ. ಅವರೊಬ್ಬ ದೂರದೃಷ್ಟಿ ಇರುವ ನಾಯಕರಾಗಿದ್ದರು. ಅವರ ಅಧಿಕಾರವಧಿಯಲ್ಲಿ ಕೈಗೊಂಡ ಕ್ರಮಗಳು ದೇಶದ ದಿಕ್ಕು ಬದಲಿಸಿವೆ ಎಂದ ಅವರು ಜಯಂತಿ ಆಚರಿಸಿದರೆ ಸಾಲದು ಅವರ ತತ್ವಾದರ್ಶಗಳನ್ನು ಮಾದಿಗ ಸಮಾಜ ಮೈಗೂಡಿಸಿಕೊಂಡು ಮುನ್ನೆಲೆಗೆ ಬರಬೇಕು. ನಿಮ್ಮ ಸಮಾಜದ ಏಳಿಗೆಗೆ ಬೇಕಾದ ಸಹಕಾರಕ್ಕೆ ನಾನು ಸದಾ ಸಿದ್ದನಿದ್ದೇನೆ ಎಂದರು.
ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾದಿಗ ಸಮಾಜ ಬಹಳಷ್ಟು ಸಂಘಟನೆಯಾಗಬೇಕು, ಸಮಾಜದ ಹಿತ ಬಂದಾಗ ವೈಮನಸ್ಸುಗಳನ್ನು ಬದಿಗಿಟ್ಟು ಒಟ್ಟಾಗೋಣ ಇಲ್ಲದಿದ್ದರೆ ಬರುವ ದಿನಗಳಲ್ಲಿ ಇನ್ನಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಸಮಾಜ ಬಾಂಧವರಿಗೆ ಕರೆ ನೀಡಿದರು.
ಜೆಡಿಎಸ್ ಮುಖಂಡ ಶಿವಕುಮಾರ ನಾಟಿಕಾರ, ಸಮಾಜ ಸೇವಕ ಜೆ.ಎಂ ಕೊರಬು ಮಾತನಾಡಿ ಹಿಂದುಳಿದ, ದಲಿತ ಸಮುದಾಯಗಳನ್ನು ರಾಜಕಾರಣಿಗಳು ತಮ್ಮಿಷ್ಟಕ್ಕೆ ಬಂದಂತೆ ಬಳಸಿ ಬೀಸಾಡುತ್ತಾರೆ. ಹೀಗಾಗಿ ಮಾದಿಗರಾದಿಯಾಗಿ ಹಿಂದುಳಿದ ಸಮಾಜಗಳು ಜಾಗೃತವಾಗಬೇಕು. ಯಾರು ನಿಮ್ಮನ್ನು ಅಪ್ಪಿಕೊಳ್ಳುತ್ತಾರೆ, ಯಾರು ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತಾರೆ ಅವರ ಜೊತೆ ಸಮಾಜ ನಿಲ್ಲಬೇಕು ಎಂದರು.
ಮಳೇಂದ್ರ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿ ಮಾದಿಗ ಸಮಾಜಕ್ಕೆ ಬಹಳ ದೊಡ್ಡ ಇತಿಹಾಸವಿದೆ. ಸಮಾಜ ಬಾಂಧವರು ಶಿಕ್ಷಿತರಾಗಿ, ಸಂಘಟಿತರಾಗಿ ಬಾಬಾ ಸಾಹೇಬರು ಕಲ್ಪಿಸಿದ ಅವಕಾಶಗಳನ್ನು ಸದುಪಯೋಗ ಪಡೆದುಕೊಂಡು ಇತರ ಸಮಾಜಗಳಂತೆ ಏಳಿಗೆ ಕಾಣುವಂತಾಗಲಿ. ಮಾದಿಗ ಸಮಾಜದ ಜೊತೆಗೆ ನಮ್ಮ ಶ್ರೀಮಠ ಸದಾ ಇರಲಿದೆ ಎಂದು ಹೇಳಿದರು.
ಉಪನ್ಯಾಸಕ ಡಾ. ಮಲ್ಲಿಕಾರ್ಜುನ ಸಾರ್ವಜಕರ, ಸ್ವತಂತ್ರರಾವ್ ಸಿಂಧೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಯಂತ್ಯೂತ್ಸವ ಸಮಿತಿ ಅಧ್ಯಕ್ಷ ನಿಂಗರಾಜ್ ಕಟ್ಟಿಮನಿ, ಮುಖಂಡರಾದ ಸಂಗಮೇಶ ಕಾರಜೋಳ, ಭೀಮಣ್ಣ ಭಿಲ್ಲವ, ಪಪ್ಪು ಪಟೇಲ್, ದಯಾನಂದ ದೊಡ್ಮನಿ, ಮಕ್ಬೂಲ್ ಪಟೇಲ್, ರಾಜಶೇಖರ ಪಾಟೀಲ್, ಡಾ. ಜಿ. ಗೋಪಾಲರಾವ್, ಶಾಮ ನಾಟಿಕಾರ, ಶ್ರೀಮಂತ ಬಿರಾದಾರ, ಬಸವರಾಜ ಚಾಂದಕವಟೆ, ಮಹಾರಾಯ ಅಗಸಿ, ರಾಜು ಆರೇಕರ, ನಂದಕುಮಾರ ಹರಳಯ್ಯ, ಚಂದು ದೇಸಾಯಿ, ಶರಣು ಕುಂಬಾರ, ಚಂದಪ್ಪ ಕರ್ಜಗಿ, ವಿಜಯಕುಮಾರ ಕೆಂಗಲ, ಶ್ರೀಕಾಂತ ಚಿಂಚೋಳಿ, ಪ್ರವೀಣ ಭಂಡಾರಿ, ಅಶೋಕ ದೊಡ್ಮನಿ, ಶಿವಶಂಕರ ಬಂದರವಾಡ, ಸುನೀಲ್ ಕಟ್ಟಿಮನಿ, ಲಕ್ಷ್ಮಣ ತೇಲ್ಕರ, ಭಾಗಣ್ಣ ಘತ್ತರಗಿ, ತಹಸಿಲ್ದಾರ ಸಂಜೀವಕುಮಾರ ದಾಸರ್ ಸೇರಿದಂತೆ ಅನೇಕರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.