ರಾಜ್ಯ ಸರಕಾರದ ವಿರುದ್ಧ ರೈತ ಸಂಘದಿಂದ ಬೃಹತ್ ಪ್ರತಿಭಟನೆ..!
ವಿಜಯಪುರ : ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿ ರೈತರನ್ನು ಪರಿಹಾರದಿಂದ ವಂಚಿತರನ್ನಾಗಿ ಮಾಡುವ ಉದ್ದೇಶದಿಂದ ಸಮೀಕ್ಷೆ ಮಾಡುವನೆಪದಲ್ಲಿ ವಿಳಂಬ ನೀತಿ ಅನುಸರಿಸಿ ವಿಜಯಪುರ ಜಿಲ್ಲೆಯ ರೈತರ ಬದುಕನ್ನು ಮೂರಾಬಟ್ಟಿ ಮಾಡಲು ಹೊರಟಿದೆ ಎಂದು ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈ ಸಂರ್ಭದಲ್ಲಿ ಸೋಮವಾರದಂದು ನೂರಾರು ರೈತ ಸಂಘದ ಕಾರ್ಯಕರ್ತರು ವಿಜಯಪುರ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಅತಿಯಾದ ಮಳೆಯಿಂದ ಹಾಳಾದ ಮುಂಗಾರು ಬೆಳೆಗಳಾದ ತೊಗರಿ, ಹತ್ತಿ, ಕೊಳೆತ ಈರುಳ್ಳಿಯನ್ನು ಕೈಯಲ್ಲಿ ಹಿಡಿದುಕೊಂಡು ಪ್ರದರ್ಶನ ಮಾಡುವ ಮೂಲಕ ಸರ್ಕಾರಕ್ಕೆ ಹಾಳಾದ ಬೆಳೆಗಳ ಸ್ಥಿತಿಗತಿಯನ್ನು ಮನದಟ್ಟು ಮಾಡಲು ಕೊಳೆತ ಈರಳ್ಳು ಹಾಗೂ ನೆಟೆ ಹಾಯ್ದ ತೊಗರಿ ಹಾಗೂ ಹತ್ತಿ ಎಲ್ಲ ಬೆಳೆಗಳನ್ನು ಕೈಯಲ್ಲಿ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿವರೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಮೂಲಕ ಕಂದಾಯ ಸಚವ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮುಂದುವರೆದು ಮಾತನಾಡಿದ ಅವರು, ವಿಜಯಪುರ ಜಿಲ್ಲೆಯು ಮೊದಲಿನಿಂದಲೂ ಬರಗಾಲದ ಜಿಲ್ಲೆಯೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ ಪ್ರತಿ ವರ್ಷ ಒಂದಲ್ಲ ಒಂದು ರೀತಿಯಿಂದ ಜಿಲ್ಲೆಯ ರೈತರು ಬರಗಾಲದ ದವಡೆಗೆ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಸ್ತುತ ವರ್ಷ ಮುಂಗಾರುನ ಹಂಗಾಮದಲ್ಲಿ ಬಿಟ್ಟು ಬಿಡದೆ ೨ ತಿಂಗಳವರೆಗೆ ವಿಪರೀತ ಮಳೆ ಸುರಿದು ಬಿತ್ತನೆ ಮಾಡಿದ ತೊಗರಿ, ಶೇಂಗಾ, ಈರುಳ್ಳಿ, ಹತ್ತಿ, ಮೆಕ್ಕೆಜೋಳ, ಸೆಜ್ಜೆ, ದಾಳಿಂಬೆ, ಲಿಂಬೆ ಸೇರಿದಂತೆ ಇನ್ನುಳಿದ ಬೆಳೆಗಳು ನೀರಿನಲ್ಲಿ ನಿಂತು ಸಂಪೂರ್ಣ ಹಾಳಾಗಿವೆ. ಇದರಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ. ಮೊದಲೇ ಬರಗಾಲದಿಂದ ತತ್ತರಿಸಿದ ರೈತರು ಸಾಲದಿಂದ ಇನ್ನೂ ಹೊರಬಂದಿಲ್ಲ. ಇಂತಹದರಲ್ಲಿ ವಿಪರೀತ ಮಳೆಯಿಂದ ಎಲ್ಲ ಬೆಳೆಗಳು ಹಾಳಾಗಿದ್ದು ರೈತರಿಗೆ ಮತ್ತಷ್ಟು ಸಾಲದ ಹೊರೆ ಹೆಚ್ಚಾಗಿದೆ. ಮುಂದಿನ ಬದುಕು ಹೇಗೆ ಎಂಬ ಚಿಂತೆ ರೈತರನ್ನೂ ಕಾಡುತ್ತಿದೆ. ಇಂತಹ ಚಿಂತಾಜನಕ ಪರಿಸ್ಥಿತಿಯಲ್ಲಿ ಸರ್ಕಾರ ರೈತರಿಗೆ ಆಸರೆಯಾಗುವುದನ್ನು ಬಿಟ್ಟು ಅನಾವಶ್ಯಕವಾಗಿ ವಿಳಂಬ ಮಾಡುತ್ತಿದೆ. ಹೈದ್ರಾಬಾದ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಿಗೆ ಈಗಾಗಲೇ ಪರಿಹಾರ ಬಿಡುಗಡೆ ಮಾಡಿದೆ. ಆದರೆ ವಿಜಯಪುರ ಜಿಲ್ಲೆಗೆ ಇನ್ನೂ ಬಿಡಿಗಾಸು ಪರಿಹಾರ ಬಿಟ್ಟಿಲ್ಲ. ಮುಖ್ಯಮಂತ್ರಿಗಳು, ಕಂದಾಯ ಸಚಿವರು, ವಿಜಯಪುರ ಜಿಲ್ಲೆ ಸಚಿವರು ಸೇರಿದಂತೆ ಇನ್ನಿತರ ಸಚಿವರು ವೈಮಾನಿಕ ಸಮೀಕ್ಷೆ ನಡೆಸಿ ಹಾಳಾದ ಬೆಳೆಗಳ ಸ್ಥಿತಿಗತಿ ಕುರಿತು ಮನವರಿಕೆ ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಸಮೀಕ್ಷೆ ಮಾಡಲಾಗುವದೆಂದು ಹೇಳಿದ್ದಾರೆ. ಇದು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಒಟ್ಟಾರೆ ಪರಿಹಾರ ಹಣ ಕೊಡಬಾರದೆಂಬ ಹುನ್ನಾರ ಮಾಡುತ್ತಿದೆ. ೨ನೇಯ ಬಾರಿ ಸಮೀಕ್ಷೆ ನಡೆಸುವ ಉದ್ದೇಶವಾದರೂ ಏನು?. ಅಂಗೈಯಲ್ಲಿ ಆಗಿರುವ ಹುಣ್ಣನ್ನು ನೋಡಲು ಕನ್ನಡಿ ಏಕೆ ಬೇಕು?. ೨ ತಿಂಗಳಿನಿAದ ನಿರಂತರಮಳೆ ಸುರಿದು ಪ್ರತಿ ಜಮೀನುಗಳಲ್ಲಿ ನೀರು ಆವರಿಸಿದೆ. ಇದನ್ನು ಕಣ್ಣಾರೆ ಕಂಡ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಬೆಳೆಗಳು ಹಾಳಾಗಿರುವುದು ಮನವರಿಕೆ ಆಗಿಲ್ಲವೆ ಹೇಗೆ. ಬೆಳೆಗಳು ಹಾಳಾಗಿ ನೊಂದ ರೈತರಿಗೆ ಪರಿಹಾರ ನೀಡಬೇಕಾದರೆ ಸರ್ಕಾರ ಇಷ್ಟೊಂದು ಚೌಕಾಸಿ ಮಾಡುವದು ಅಗತ್ಯವೆನಿದೆ.
ಬೆಳೆ ಹಾಳಾಗಿರುವುದಂತು ನಿಜವಿದೆ. ಆದರೂ ಸರ್ಕಾರ ಪರಿಹಾರ ಕೊಡಲು ಹಿಂದೆಟು ಹಾಕುತ್ತಿದೆ. ಪ್ರತಿಯೊಂದು ವಿಷಯದಲ್ಲಿಯೂ ವಿಜಯಪುರ ಜಿಲ್ಲೆ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಸರ್ಕಾರ ವಂಚನೆ ಮಾಡುತ್ತಾ ಬಂದಿದೆ. ಮಲತಾಯಿ ಧೋರಣೆ ಅನುಸರಿಸುವದನ್ನು ಬಿಟ್ಟು ಎಲ್ಲ ಬೆಳೆಗಳಿಗೂ ಸೂಕ್ತ ಪರಿಹಾರ ಕೊಡಬೇಕು. ಪ್ರತಿಯೊಂದು ಬೆಳೆಗಳು ಸಂಪೂರ್ಣ ನೀರು ನಿಂತು ಕೊಳೆತು ಹೋಗಿವೆ. ಇದರಲ್ಲಿ ಈರುಳ್ಳಿ ಬೆಳೆದ ರೈತರ ಗೋಳು ಹೇಳತೀರದಾಗಿದೆ. ಉಳಿದ ಅಲ್ಪ ಸ್ವಲ್ಪ ಈರುಳ್ಳಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಪ್ರತಿ ಕ್ವಿಂಟಾಲ್ ಈರುಳ್ಳಿಗೆ ೪೦೦ ರಿಂದ ೬೦೦ ರೂಗಳಿಗೆ ತಮ್ಮ ಮನಸಿಗೆ ಬಂದAತೆ ಕೇಳುತ್ತಾರೆ. ಉತ್ತಮವಾಗಿರುವ ಈರುಳ್ಳಿ ೮೦೦-೧೦೦೦ ವರೆಗೆ ಮಾರಾಟವಾಗುತ್ತಿದೆ. ಅನಿವಾರ್ಯವಾಗಿ ರೈತರು ಈರುಳ್ಳಿ ಮಾರಾಟ ಮಾಡಿ ತಮ್ಮ ಜೇಬಿನಿಂದಲೇ ವಾಹನ ಬಾಡಿಗೆ ಕೊಟ್ಟು ಊಟಕ್ಕೂ ಕೂಡಾ ಹಣ ಉಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ತೊಗರಿ ಬೆಳೆಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಪ್ರತಿ ಎಕರೆಯಲ್ಲಿ ತೊಗರಿ ಬೆಳೆಯಬೇಕಾದರೆ ಜಮೀನು ಸೇರಿದಂತೆ ಬೀಜ, ಗೊಬ್ಬರ, ಕ್ರೀಮಿನಾಶಕ, ಕೂಲಿ ಕಾರ್ಮಿಕರ ಸಂಬಳ, ಸಾರಿಗೆ ವೆಚ್ಚ ಎಲ್ಲವನ್ನೂ ಲೆಕ್ಕ ಹಾಕಿದರೆ ಪ್ರತಿ ಎಕರೆ ಜಮೀನನ್ನು ಹದಗೊಳಿಸಲು ೩೦,೦೦೦ ರವರೆಗೆ ಖರ್ಚಾಗುತ್ತದೆ. ಈ ಕುಂಭದ್ರೋಣ ಮಳೆಯಿಂದಾಗಿ ಬಹುತೇಕ ತೊಗರಿ ಬೆಳೆ ನೀರಿನಲ್ಲಿ ನಿಂತು ಕೊಳೆತು ಹೋಗಿವೆ . ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹತ್ತಿ ಬೆಳೆದ ರೈತರ ಪರಿಸ್ಥಿತಿಯೂ ಇದೆ ಗತಿಯಾಗಿದೆ. ಆದ್ದರಿಂದ ಸರ್ಕಾರ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ಮೋಸ ಮಾಡದೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡದೇ ನೂರಕ್ಕೆ ನೂರರಷ್ಟು ಬೆಳೆಗಳು ಹಾನಿಯಾಗಿವೆ ಎಂದು ಪರಿಗಣಿಸಿ ಶೀಘ್ರದಲ್ಲಿ ಪರಿಹಾರ ಹಣ ಬಿಡುಗಡೆಗೊಳಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಸರ್ಕಾರಕ್ಕೆ ಒತ್ತಾಯಿಸುತ್ತದೆ.
ಈ ಪ್ರತಿಭಟನೆಯಲ್ಲಿ ಸಂಗನ ಬಸವ ಶ್ರೀಗಳು, ಬಸವನ ಬಾಗೇವಾಡಿ ತಾಲೂಕಾ ಅಧ್ಯಕ್ಷರಾದ ಉಮೇಶ ವಾಲೀಕಾರ, ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಮಲ್ಲಿಕಾರ್ಜುನ ಕೆಂಗನಾಳ, ಹೊನಕೇರೆಪ್ಪ ತೆಲಗಿ, ಚಂದ್ರಾಮ ತೆಗ್ಗಿ, ಗುರುಬಸಯ್ಯ ತೆಗ್ಗಿನಮಠ, ಶ್ರೀಶೈಲ ಕುರನದ, ಮೈಬೂಬ ಮುಲ್ಲಾ, ರ‍್ಯಾವಪ್ಪಗೌಡ ಪುಲೇಶಿ, ಶರಣಪ್ಪ ಮುರಡಿ, ಶೇಖಪ್ಪ ಮುರಡಿ, ಶಿವಲಿಂಗಪ್ಪ ಕಾಮನಕೇರಿ, ಸಂತೋಷ ಪಾಟೀಲ, ಶಿವಪ್ಪ ಸುಂಗಠಾಣ, ಸಂಗಪ್ಪ ಪಡಸಲಗಿ, ಮಲ್ಲಪ್ಪ ಪಡಸಲಗಿ, ಗುರಲಿಂಗಪ್ಪ ಪಡಸಲಗಿ, ದಾವಲಸಾ ನಧಾಪ, ರಾಜೇಶ ವಾಲೀಕಾರ, ಗಿರಮಲ್ಲಪ್ಪ ದೊಡಮನಿ, ನಾಗಪ್ಪ ಬೂದಗೋಳಿ, ಶಂಕ್ರಪ್ಪ ಸುಂಟ್ಯಾಣ, ಸಿದ್ದಪ್ಪ ಸುಂಟ್ಯಾಣ, ಸಂಗನಗೌಡ ಬಿರಾದಾರ, ಬಸು ಹೆಬ್ಬಾಳ, ಪರಸಪ್ಪ ಜೋಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.