ತಳೇವಾಡಕ್ಕೆ ಪಶು ಚಿಕಿತ್ಸಾಲಯ ಮಂಜೂರು ಸಚಿವ ಶಿವಾನಂದ ಪಾಟೀಲರ ಪ್ರಯತ್ನದ ಫಲ
ಕೊಲ್ಹಾರ : ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಇವರ ಪ್ರಯತ್ನದ ಫಲವಾಗಿ ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಲ್ಹಾರ ತಾಲೂಕಿನ ತಳೇವಾಡ ಗ್ರಾಮಕ್ಕೆ ಸರ್ಕಾರ ಹೊಸದಾಗಿ ಪಶು ಚಿಕಿತ್ಸಾಲಯ ಮಂಜೂರು ಮಾಡಿದೆ.
ಈ ಕುರಿತು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್. ಮಂಗಳಗೌರಿ ಅಧಿಕೃತವಾಗಿ ತಳೇವಾಡ ಗ್ರಾಮಕ್ಕೆ ಪಶು ಚಿಕಿತ್ಸಾಲಯ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ತಳೇವಾಡ ಗ್ರಾಮಕ್ಕೆ ಪಶು ಚಿಕಿತ್ಸಾಲಯ ಮಂಜೂರು ಮಾಡಿದ್ದರಿಂದ ಈ ಭಾಗದ ಹಲವು ಹಳ್ಳಿಗಳ ಜಾನುವಾರು ಪಾಲಕರಿಗೆ ತಮ್ಮ ಪಶುಗಳಿಗೆ ತ್ವರಿತವಾಗಿ ಆರೋಗ್ಯ ಸೇವೆ ಪಡೆಯುವುದಕ್ಕೆ ಅನುಕೂಲ ಆಗಲಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುತ್ತಿರುವ ಸಚಿವರಾದ ಶಿವಾನಂದ ಪಾಟೀಲ ಅವರ ಅಭಿವೃದ್ಧಿ ಪರ ಬದ್ಧತೆಗೆ ಕ್ಷೇತ್ರದ ಜನರು ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯಪುರ ಜಿಲ್ಲೆಗೆ ಕೊಲ್ಹಾರ ತಾಲೂಕಿನ ತಳೇವಾಡ ಮಾತ್ರವಲ್ಲದೆ ಇಂಡಿ ತಾಲೂಕಿನ ಬಬಲಾದ, ತಾಳಿಕೋಟಿ ತಾಲೂಕಿನ ಪಡೇಕನೂರ ಸೇರಿದಂತೆ ರಾಜ್ಯದ 20 ಗ್ರಾಮಗಳಿಗೆ ಪಶು ಚಿಕಿತ್ಸಾಲಯಗಳನ್ನು ಮಂಜೂರಾತಿ ಮಾಡಲಾಗಿದೆ.
2022-23 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ 100 ಪಶು ಚಿಕಿತ್ಸಾಲಯಗಳಲ್ಲಿ ಈಗಾಗಲೇ 60 ಪಶು ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ. 2025-26 ನೇ ಸಾಲಿನಲ್ಲಿ ಆರ್ಥಿಕ ಇಲಾಖೆಯ ಅನುಮೋದನೆಯೊಂದಿಗೆ 20 ಪಶು ಚಿಕಿತ್ಸಾಲಯಗಳ ಸ್ಥಾಪನೆಗೆ ತಲಾ 10 ಲಕ್ಷ ರೂ.ಗಳಂತೆ ಒಟ್ಟು 2 ಕೋಟಿ ರೂ. ಮಂಜೂರಾತಿ ಸಹಿತ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.