ಅಂಜುಮನ್ ಚುನಾವಣೆ ಶೀಘ್ರದಲ್ಲಿ ನಡೆಸಲು ತಹಶಿಲ್ದಾರರಿಗೆ ಮನವಿ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ಅಂಜುಮನ ಇಸ್ಲಾಂ ಸಂಸ್ಥೆಯ ಚುನಾವಣೆಯನ್ನು ಶೀಘ್ರವಾಗಿ ನಡೆಸಬೇಕೆಂದು ಸ್ಥಳೀಯರು ಒತ್ತಾಯ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತಹಶೀಲ್ದಾರ ಕಿರ್ತಿ ಚಾಲಾಕ್ ಮುಖಾಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಅಂಜುಮನ ಇಸ್ಲಾಂ ಸಂಸ್ಥೆಯು ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಮಹತ್ವದ ಪಾತ್ರವಹಿಸುತ್ತಿರುವುದರಿಂದ, ಸಂಸ್ಥೆಯ ಆಡಳಿತವು ಪಾರದರ್ಶಕವಾಗಿ ನಡೆಯಲು ಪ್ರಜಾಪ್ರಭುತ್ವದ ವಿಧಾನದಲ್ಲಿ ಚುನಾವಣೆ ಅಗತ್ಯವಿದೆ ಎಂದು ತಿಳಿಸಲಾಗಿದೆ. ಹಲವು ವರ್ಷಗಳಿಂದ ಚುನಾವಣೆಯು ಜರುಗದೇ ಇರುವ ಕಾರಣ ಸದಸ್ಯರು ಹಾಗೂ ವಿದ್ಯಾರ್ಥಿ ಪೋಷಕರಲ್ಲಿ ಅಸಮಾಧಾನ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಚುನಾವಣೆ ನಡೆದರೆ ಸದಸ್ಯರ ಅಭಿಪ್ರಾಯಗಳಿಗೆ ತಕ್ಕಂತೆ ನೂತನ ಆಡಳಿತ ಮಂಡಳಿ ರಚನೆಗೊಂಡು ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಬುನಾದಿಯಾಗುತ್ತದೆ ಎಂಬ ಅಭಿಪ್ರಾಯವನ್ನು ಮನವಿ ಪತ್ರದಲ್ಲಿ ವ್ಯಕ್ತಪಡಿಸಲಾಗಿದೆ. ಈಗಾಗಲೇ ಕರ್ನಾಟಕ ರಾಜ್ಯ ವಕ್ಪ ಬೋರ್ಡಿನಿಂದ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿರುವುದನ್ನು ಕೂಡ ಮನವಿಯಲ್ಲಿ ಸ್ಮರಿಸಲಾಗಿದೆ.
ಈ ಸಂದರ್ಭದಲ್ಲಿ ಹುಸೇನ ಮುಲ್ಲಾ, ಅಂಜುಮನ್ ಮಾಜಿ ಅಧ್ಯಕ್ಷ ಅಲ್ಲಾಭಕ್ಷ ನಾಯ್ಕೋಡಿ, ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಗೋಲಂದಾಜ, ಮಹಿಬೂಬ ಅತ್ತಾರ, ಸುಲೇಮಾನ ಮಮದಾಪೂರ, ಸಿಕಂದರ ಜಾನ್ವೇಕರ, ಬುಡ್ಡಾ ರಿಸಾಲ್ದಾರ, ಮಲಿಕ್ ನದಾಪ, ಪಾರೂಖ್ ಚೌದ್ರಿ, ಇರಪಾನ ಕೂಡಗಿ, ರಪೀಕ ಮಕಾಂದಾರ, ಇಸಾಕ್ ಮಕಾಂದಾರ, ಸುಪಿಯಾನ ಮೋಮಿನ್ ,ಸೇರಿದಂತೆ ಉಪಸ್ಥಿತರಿದ್ದರು.