ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಆಗದಿದ್ದರೆ ಅಧಿಕಾರಿಗಳಿಗೆ ಫೇರಾವ್
ಇಂಡಿ: ಬಹು ದಿನಗಳಿಂದ ಇಂಡಿ ನಗರದಲ್ಲಿ ನಿರ್ಮಾಣ ಹಂತದಲ್ಲಿಯೇ ಅರ್ದಕ್ಕೆ ನಿಂತ ಸಂವಿಧಾನಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆಯ ಕಾಮಗಾರಿ ಹಾಗೂ ಬುದ್ಧ ವಿಹಾರ ನಿರ್ಮಾಣ ಕಾಮಗಾರಿ ಪ್ರಾರಂಭಿಸದೆ ಇದ್ದಲ್ಲಿ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಫೇರಾವ್ ಹಾಕುತ್ತೇವೆ ಎಂದು ಆರ್‌ಪಿಐ ಪಕ್ಷದ ತಾಲೂಕು ಅಧ್ಯಕ್ಷ ಹಾಗೂ ದಲಿತ ಮುಖಂಡ ನಾಗೇಶ ತಳಕೇರಿ ಹೇಳಿದರು. ಅವರು ಬುಧವಾರ ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಹಳ ವರ್ಷಗಳ ಹಿಂದೆಯೇ ಬಿ. ಆರ್. ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪಿಸಿ ಲೋಕಾರ್ಪಣೆ ಮಾಡಬೇಕಾಗಿತ್ತು. ಆದರೆ ಇದುವರೆಗೂ ಆ ಕಾರ್ಯವಾಗಿಲ್ಲ, ಅಧಿಕಾರಿಗಳನ್ನು ಕೇಳಿದರೆ ಗುಲಬರ್ಗಾದಲ್ಲಿ ಅಂಬೇಡ್ಕರ್ ಅವರ ಮೂರ್ತಿ ತಯಾರಾಗಿದೆ ಇಂಡಿ ಸರ್ಕಲ್ ನಲ್ಲಿನ ಕಾಮಗಾರಿ ಮುಗಿದ ತಕ್ಷಣ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ, ಕಳೆದ ಎರಡು ವರ್ಷಗಳಿಂದಲೂ ಇದೇ ರೀತಿ ಹೇಳುತ್ತಿದ್ದು ಇದು ದಲಿತರಿಗೆ ಮಾಡುತ್ತಿರುವ ದೊಡ್ಡ ಮೋಸ ಹಾಗೂ ಅನ್ಯಾಯವಾಗಿದೆ, ಅಂಬೇಡ್ಕರ್ ಅನುಯಾಯಿಗಳಾದ ನಾವು ಇದನ್ನು ಖಂಡಿಸುತ್ತೇವೆ ಎಂದರು.