ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಭಾರತೀಯ ಜನತಾ ಪಕ್ಷ ಪ್ರತಿಭಟನೆಗೆ
ವಿಜಯಪುರ : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಿದ ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿರುವ ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಭಾರತೀಯ ಜನತಾ ಪಕ್ಷ ರಾಜ್ಯದಾದ್ಯಂತ ಪ್ರತಿಭಟನೆಗೆ ಅಣಿಯಾದ ಹಿನ್ನೆಲೆಯಲ್ಲಿ ಹೋರಾಟದ ಭಾಗವಾಗಿ ಬಿಜೆಪಿ ಕಾರ್ಯಕರ್ತರು ಬಂಜಾರಾ ಅಭಿವೃದ್ಧಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ತಡೆಯಲು ಮುಂದಾದರು. ಈ ವೇಳೆ ಕೆಲ ಕಾಲ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಬಿಜೆಪಿ ಕಾರ್ಯಕರ್ತರು ನಿಗಮದ ಕಚೇರಿಗೆ ಘೋಷಣೆ ಕೂಗುತ್ತಾ ಮುತ್ತಿಗೆ ಹಾಕುವ ೪೦ ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಎಸ್‌ಸಿಪಿ-ಟಿಎಸ್‌ಪಿ ಅನುದಾನಕ್ಕೂ ಕೈ ಹಾಕಿ ದಲಿತ ವರ್ಗದ ಜನರಿಗೆ ಬಹುದೊಡ್ಡ ಅನ್ಯಾಯ ಮಾಡುತ್ತಿದೆ, ೨೦೨೩ ರಲ್ಲಿ ಎಸ್‌ಸಿಪಿ ಅಡಿಯಲ್ಲಿ ೭೭೧೩.೧೫ ಕೋಟಿ ರೂ. ಹಾಗೂ ಟಿಎಸ್‌ಪಿ ಅಡಿ ೩೪೩೦.೮೫ ಕೋಟಿ ರೂ. ಸೇರಿದಂತೆ ಒಟ್ಟು ೧೧೧೪೪ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿರುವುದು ಅನ್ಯಾಯವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರಬಲ ವಿರೋಧ ವ್ಯಕ್ತವಾದರೂ ಸಹ ಸರ್ಕಾರ ತನ್ನ ಚಾಳಿ ಮುಂದುವರೆಸಿ ೨೦೨೪ರಲ್ಲಿಯೂ ಸಹ ಎಸ್‌ಸಿಪಿ ಅಡಿಯಲ್ಲಿ ೯೯೮೦.೬೬ ಕೋಟಿ ರೂ ಹಾಗೂ ಟಿಎಸ್‌ಪಿ ಅಡಿಯಲ್ಲಿ ೪೩೦೨ ಕೋಟಿ ರೂ. ಸೇರಿದಂತೆ ಒಟ್ಟು ೧೪೨೮೨.೬೮ ಕೋಟಿ ರೂ. ಬಳಕೆ ಮಾಡಿಕೊಂಡು ಮತ್ತೊಮ್ಮೆ ಘೋರ ಅನ್ಯಾಯವೆಸಗಿದೆ ಎಂದು ದೂರಿದರು.
ಉಳಿದ ವರ್ಗದವರಿಗೆ ಸರ್ಕಾರದ ಖಜಾನೆಯಿಂದ ಅನುದಾನ ಬಿಡುಗಡೆಯಾಗುತ್ತಿದೆ, ಆದರೆ ದಲಿತ ಬಾಂಧವರಿಗೆ ಈ ಯೋಜನೆಯ ಹಣವನ್ನೇ ಗ್ಯಾರಂಟಿ ಯೋಜನೆಗೂ ನೀಡಿದರೆ ಹೇಗೆ ಇದು ಅವೈಜ್ಞಾನಿಕ ಅಷ್ಟೇ ಅಲ್ಲ ಅನ್ಯಾಯವೂ ಸಹ ಹೌದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ರಾಜ್ಯ ಸರ್ಕಾರ ದಲಿತ ಬಾಂಧವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ, ಕೇವಲ ಮಾತಿನಲ್ಲಿ ದಲಿತಪರ ಎಂದು ಹೇಳುತ್ತಿದೆ ಹೊರತು ದಲಿತ ಸಮುದಾಯಗಳ ಅಭಿವೃದ್ಧಿ ಯೋಜನೆಯ ಹಣವನ್ನು ದುರಪಯೋಗಮಾಡಿ ದಲಿತ ವಿರೋಧಿ ಎಂಬುದನ್ನು ಕಾಂಗ್ರೆಸ್ ಸಾಬೀತುಪಡಿಸಿದೆ ಎಂದು ದೂರಿದರು.
ಅಲ್ಪಸಂಖ್ಯಾತರಿಗೆ ಪ್ರತ್ಯೇಕವಾದ ಅನುದಾನವನ್ನು ಕಾಯ್ದಿರಿಸಲಾಗಿದೆ, ಈ ಪಂಚ ಗ್ಯಾರಂಟಿ ಯೋಜನೆಗಳಿಗೆ ಈ ಅನುದಾನ ಬಳಕೆ ಮಾಡುತ್ತಿಲ್ಲ, ಆದರೆ ದಲಿತ ಬಾಂಧವರಿಗೆ ಗ್ಯಾರಂಟಿ ಯೋಜನೆಗಳಿಗೆ ನೀಡುವಾಗ ದಲಿತರ ಶ್ರೇಯೋಭಿವೃದ್ಧಿಗಾಗಿ ಇರಿಸಿದ ಅನುದಾನ ಬಳಕೆ ಮಾಡುತ್ತಿದೆ ಇದು ಯಾವ ಸೀಮೆಯ ನ್ಯಾಯ? ಎಂದು ಅಂಗಡಿ ಖಾರವಾಗಿ ಪ್ರಶ್ನಿಸಿದರು.
ಬಿಜೆಪಿ ಯುವ ಮುಖಂಡ ಮಹೇಂದ್ರಕುಮಾರ ನಾಯಕ ಮಾತನಾಡಿ, ಕಾಂಗ್ರೆಸ್ ದಲಿತ ವಿರೋಧಿ ಇಂದು ನಿನ್ನೆಯದಲ್ಲ, ಕೇವಲ ಬಾಯಿಮಾತಿನಲ್ಲಿ ದಲಿತಪರ ಎಂದು ಹೇಳುವ ಕಾಂಗ್ರೆಸ್‌ಗೆ ದಲಿತರ ಮೇಲೆ ಎಳ್ಳಷ್ಟೂ ಕಾಳಜಿ ಇಲ್ಲ ಎಂದರು.
ಎಸ್.ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಪ್ರಮುಖರಾದ ರವಿ ವಗ್ಗೆ, ಮಂಜುನಾಥ ಮೀಸೆ, ಭರತ ಕೋಳಿ, ಎಸ್.ಎ.ಪಾಟೀಲ, ಶಿಲ್ಪಾ ಕುದರಗುಂಡ, ಬಸವರಾಜ ಬೈಚಬಾಳ, ಉಮೇಶ ಕೋಳಕೂರ, ಸಾಬು ಮಾಶ್ಯಾಳ, ಶ್ರೀಹರಿ ಗೊಳಸಂಗಿ ಸಂಜಯಪಾಟೀಲ್ ಕನಮಡಿ, ವಿಜಯ ಜೋಶಿ, ವಿಕಾಸ್ ಪದಕಿ, ಮಲ್ಲಿಕಾರ್ಜುನ ದೇವರಮನಿ, ಗುರು ತಳವಾರ, ಸಿದ್ದು ಮಖಣಾಪೂರ, ಮಲ್ಲಮ್ಮ ಜೋಗೂರ, ರಾಜಕುಮಾರ ಸಗಾಯಿ, ಅಶೋಕ ರಾಠೋಡ, ವಿನೋದಕುಮಾರ ಮಣೂರ, ಪ್ರಶಾಂತ ಪವಾರ, ವಿನೋದ ಕೋಳೂರ, ಶರತಸಿಂಗ್ ರಜಪೂತ, ವಿನಯ ಬಬಲೇಶ್ವರ, ಶೀಲವಂತ ಉಮರಾಣಿ, ರಾಜೇಶ ತಾವಸೆ, ಮಂಜುಳಾ, ನಾಗರಾಜ ಪಾಟೀಲ, ಕಾಂತು ಶಿಂಧೆ, ಸಂದೀಪ್ ಪಾಟೀಲ ಪಾಲ್ಗೊಂಡಿದ್ದರು.