ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ-
ಸಂತೋಷ ಬಂಡೆ
ಇಂಡಿ: ಜಾತಿ, ಮತ, ಪಂಗಡ, ಧರ್ಮ, ಭಾಷೆ, ದೇಶವೆನ್ನದೇ ಇಡೀ 42 ವರ್ಷಗಳ ಕಾಲ ದೇಶದಲ್ಲಿ ಮಾತ್ರವಲ್ಲದೇ ಇಂಗ್ಲೆಂಡ್ ಸೇರಿದಂತೆ ವಿದೇಶದಲ್ಲೂ ತಮ್ಮ ಮಹಾಂತ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದ ಡಾ. ಮಹಾಂತ ಶಿವಯೋಗಿಗಳ ಜೀವನವೇ ನಮಗೆಲ್ಲ ಪ್ರೇರಣೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನದ ನಿಮಿತ್ತ ಹಮ್ಮಿಕೊಂಡ ‘ವ್ಯಸನಮುಕ್ತ ದಿನಾಚರಣೆ’ಯನ್ನು ಉದ್ಧೇಶಿಸಿ ಮಾತನಾಡಿದರು.
ಕ್ಷಣಿಕ ಸುಖಕ್ಕೆ ಬದುಕನ್ನು ಬಲಿಕೊಡದೆ ದುಶ್ಚಟಗಳ ದುಷ್ಪರಿಣಾಮ ಅರಿತು ಎಚ್ಚರದಿಂದಿದ್ದು ದೇಶದ ಸತ್ಪ್ರಜೆಗಳಾಗಿ ಬದುಕು ನಡೆಸಬೇಕು. ವ್ಯಸನ ಮುಕ್ತ ಸಮಾಜಕ್ಕಾಗಿ ಎಲ್ಲರೂ ಸಂಘಟಿತರಾಗಿ ಕೈ ಜೋಡಿಸಲು ಕಂಕಣಬದ್ಧರಾಗಬೇಕು ಎಂದರು.
ದುರ್ವ್ಯಸನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು ಎಂದರು.
ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರದ ಭವಿಷ್ಯ ರೂಪಿಸಬೇಕಾಗಿರುವ ವಿದ್ಯಾರ್ಥಿ ಸಮೂಹ ವ್ಯಸನಿಗಳ ಸಹವಾಸ, ಮೋಜು ಮಸ್ತಿಗಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ವ್ಯಸನಗಳಿಗೆ ಬಲಿಯಾದವರು ಶಾರೀರಿಕ, ಮಾನಸಿಕ ನಿಯಂತ್ರಣ ಕಳೆದುಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಮಾಜಕ್ಕೆ ನೈಜ ಅರಿವು ಮೂಡಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ವ್ಯಸನ ಮುಕ್ತ ಜೀವನಕ್ಕಾಗಿ ಪ್ರತಿಜ್ಞೆ ಸ್ವೀಕಾರ ಮಾಡಿ, ಭಿತ್ತಿಚಿತ್ರಗಳ ಮೂಲಕ ಜಾಗೃತಿ ಮೂಡಿಸಿದರು. ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.