ಇಂಡಿ :ತಾಲ್ಲೂಕಿನ ತಾಂಬಾ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಾರ್ಯ ಶ್ಲಾಘನೀಯ ಎಂದು ಪ್ರಶಾಂತ ಭೈರಾಮಡಗಿ ಹೇಳಿದರು.
ಶನಿವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಂದೆ ದಿ. ಎಮ್.ಡಿ. ಭೈರಾಮಡಗಿ ಶಿಕ್ಷಕರ ಸ್ಮರಣಾರ್ಥ ಧ್ವಜಾರೋಹಣ ಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನಮ್ಮ ತಂದೆಯವರು ಮಕ್ಕಳಗೆ ಆಸ್ತಿ ಮಾಡುವುದಕ್ಕಿಂತ, ಮಕ್ಕಳನ್ನೇ ಆಸ್ತಿಯನ್ನಾಗಿ ತಿಳಿದು, ನಮ್ಮ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ನಮ್ಮ ತಂದೆಯವರು ಕೂಡ ಒಬ್ಬ ಶಿಕ್ಷಕರು ಅವರ ಸ್ಮರಣಾರ್ಥ ಪ್ರಜ್ವಲ್ ಮತ್ತು ಪ್ರಶಾಂತ ಭೈರಾಮಡಗಿ ಬಂಧುಗಳಿಂದ ಧ್ವಜಾರೋಹಣದ ಕಟ್ಟೆ ನಿರ್ಮಾಣಕ್ಕೆ ೫೦ ರಿಂದ ೬೦ ಸಾವಿರ ರೂಪಾಯಿಯಲ್ಲಿ ಒಂದು ಸುಂದರವಾದ ಕಟ್ಟೆಯನ್ನು ನಿರ್ಮಾಣ ಗೊಳಿಸುತ್ತಿದ್ದೇವೆ. ಸರ್ಕಾರದೊಂದಿಗೆ ಸಮುದಾಯವೂ ಸಹಕಾರ ನೀಡಿದರೆ ಸರ್ಕಾರಿ ಶಾಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರ್ಕಾರಿ ಶಾಲೆ ಹೆಮ್ಮರವಾಗಿ ಬೆಳೆಯಲ್ಲು ಶಿಕ್ಷಕರು, ಎಸ್.ಡಿ.ಎಮ್.ಸಿ ಅಧ್ಯಕ್ಷರು ಮತ್ತು ಗ್ರಾಮಸ್ಥರ ಶ್ರಮ ಕಾರಣವಾಗಿರುತ್ತದೆ. ವಿದ್ಯಾರ್ಥಿಗಳು ದೇವರಿಗೆ ಸಮಾನ, ಶಿಕ್ಷಕ ವೃತ್ತಿ ಪವಿತ್ರವಾದದ್ದು, ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಗುರುತರ ಜವಾಬ್ದಾರಿ. ಶಿಕ್ಷಕರ ಮೇಲಿದೆ, ಆಗ ಅವರ ಜೀವನದಲ್ಲಿ ಒಳ್ಳೆಯ ಭವಿಷ್ಯ ನಿರ್ಮಣವಾಗುತ್ತದೆ.ಅದರಿಂದ ಅವರು ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಗುರು ಪಿ.ಕೆ. ಬಿರಾದಾರ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸಿದ್ದು ಹತ್ತಳ್ಳಿ, ಉಪಾಧ್ಯಕ್ಷ ವಿಠ್ಠಲ ಹೋರ್ತಿ, ಗ್ರಾಮ ಪಂಚಾಯತ ಉಪಾಧ್ಯಕ್ಷ ರಾಮಚಂದ್ರ ದೊಡಮನಿ, ಸದಸ್ಯ ಪರಸು ಬಿಸನಾಳ, ರೇವಪ್ಪ ಹೋರ್ತಿ, ಜಿ.ಎಸ್.ದುದ್ದಗಿ, ಎಸ್.ಕೆ. ಕೆಡದ, ಎಸ್.ಆರ್. ಬೋಸಲೆ ಉಪಸ್ಥಿತರಿದ್ದರು.
ತಾಂಬಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಂದೆ ದಿ. ಎಮ್.ಡಿ. ಭೈರಾಮಡಗಿ ಅವರ ಸ್ಮರಣಾರ್ಥ ಧ್ವಜಾರೋಹಣ ಕಟ್ಟೆ ನಿರ್ಮಾಣಕ್ಕೆ ಪ್ರಜ್ವಲ್ ಮತ್ತು ಪ್ರಶಾಂತ ಭೈರಾಮಡಗಿ ಬಂಧುಗಳಿಂದ ಭೂಮಿ ಪೂಜೆ ನೆರವೇರಿತು.