ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ-ಅರಿವು ಅಗತ್ಯ
ಇಂಡಿ: ಮಾದಕ ವಸ್ತುಗಳ ಸೇವನೆಗೆ ಒಳಗಾದರೆ, ಅದರಿಂದ ಹೊರಬರುವುದು ತುಂಬಾ ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಪಿಡುಗಿನ ಜಾಗೃತಿಯ ಅರಿವು ಮಕ್ಕಳಲ್ಲಿ ಮೂಡಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಬ್ಯಾಗ್ ಲೆಸ್ ಡೇ ಅಂಗವಾಗಿ ‘ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ’ ವಿಷಯದ ಕುರಿತು ಮಾತನಾಡಿದರು.
ಕೆಡುಕಿಗೆ ಆಕರ್ಷಣೆ ಹೆಚ್ಚು. ಬೀಡಿ, ಸಿಗರೇಟು ಸೇರಿದಂತೆ ತಂಬಾಕನ್ನು ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಇದು ಜೀವನದ ಜತೆಗೆ ಆರ್ಥಿಕ ನಷ್ಟವನ್ನು ತರುತ್ತದೆ. ಮಾನವಾಭಿವೃದ್ಧಿಗೆ ದೊಡ್ಡ ಕಂಟಕವಾಗಿರುವ ಈ ಪಿಡುಗನ್ನು ಮೂಲ ಬೇರು ಸಮೇತ ಇಲ್ಲವಾಗಿಸುವುದು ಅತ್ಯಗತ್ಯ ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಪ್ರಪಂಚಾದ್ಯಂತ ಕಂಡುಬರುವ ಒಂದು ದೊಡ್ಡ ಪಿಡುಗು. ಇದು ಗಂಡು-ಹೆಣ್ಣು,
ಬಡವ-ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲೆಡೆಯೂ ಕಂಡುಬರುತ್ತದೆ. ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಅರಿವು ಎಲ್ಲರಲ್ಲಿ ಮೂಡಿಸಬೇಕು ಎಂದು ಹೇಳಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.