ಪುರುಷೋತ್ತಮ ಗಲಗಲಿ ಜಾನಪದ ಸಾಹಿತ್ಯ ಲೋಕದ ದಿಗ್ಗಜ-ಗಂಗಾ ಗಲಗಲಿ
ಇಂಡಿ: ಹಲಸಂಗಿ ಗ್ರಾಮದ ಮಧುರಚೆನ್ನರ ಹಿರಿಯ ಮಗನಾಗಿದ್ದ ಪುರುಷೋತ್ತಮ ಗಲಗಲಿ ಅವರು ಜಾನಪದ ಸಾಹಿತ್ಯ ಲೋಕದ ದಿಗ್ಗಜರಾಗಿದ್ದರು. ಅವರು ಅರವಿಂದೋ ಆಶ್ರಮದ ಹಿರಿಯ ಸಾಧಕರಾಗಿ, ಅರವಿಂದರ ತತ್ತ್ವಜ್ಞಾನವನ್ನು ಗ್ರಾಮೀಣ ಭಾಗದ ಜನರಿಗೆ ತಿಳಿಸಲು ಪ್ರಯತ್ನಿಸಿದ್ದರು ಎಂದು ಸಾಹಿತಿ ಗಂಗಾ ಗಲಗಲಿ ಹೇಳಿದರು.
ಅವರು ಶನಿವಾರದಂದು ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ‘ಪುರುಷೋತ್ತಮ ಗಲಗಲಿ-ಬದುಕು ಬರಹ’
ಕುರಿತ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಪುರುಷೋತ್ತಮರು ಅರವಿಂದರ ಪೂರ್ಣಯೋಗದ ಪ್ರತೀಕ. ಉತ್ಸುಕತೆ, ಉತ್ಸಾಹದ ಚಿಲುಮೆ ಅವರಾಗಿದ್ದರು.
ಅವರಿಂದ ಹಲಸಂಗಿ ಗ್ರಾಮ ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿ ಸ್ಥಾನ ಪಡೆಯಿತು. ನಾಡತಾಯಿಯ ಜಾಗೃತಿಗಾಗಿ ಜೀವನ ಸವೆಸಿದ್ದಾರೆ ಎಂದು ಹೇಳಿದರು.
ಸಾಹಿತ್ಯಿಕ-ಸುಸಂಸ್ಕೃತ ಕುಟುಂಬದ ಹಿನ್ನೆಲೆ ಹೊಂದಿದ ಇವರು ಶಿಕ್ಷಕ, ಶಿಕ್ಷಣ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ. ಬೇಂದ್ರೆಯವರಂತಹ ಅನೇಕ ಸಾಹಿತ್ಯಿಕ ದಿಗ್ಗಜರ ಜತೆ ಒಡನಾಟ ಹೊಂದಿದ ಇವರು ಬದುಕಿನುದ್ದಕ್ಕೂ ಸಮಯಕ್ಕೆ ಬೆಲೆ ಕೊಟ್ಟವರು. ಪುಸ್ತಕ ಪ್ರೀತಿ ಹೊಂದಿದ ಇವರು
ಎಲ್ಲರನ್ನು ಪ್ರೋತ್ಸಾಹಿಸುವ ಗುಣ ಹೊಂದಿದ್ದರು ಎಂದು ಹೇಳಿದರು.
ಸಾಲೋಟಗಿಯ ಸಾಹಿತಿ ಗೀತಯೋಗಿ ಮಾತನಾಡಿ,
ಮಧುರಚೆನ್ನರ ವಂಶವೃಕ್ಷದಲ್ಲಿ ಬೆಳೆದ ಪುರುಷೋತ್ತಮರು ಜಾನಪದ ವಿದ್ವಾಂಸರಾಗಿದ್ದರು. ಗಡಿ ಭಾಗದಲ್ಲಿ ಹಲಸಂಗಿ ಗೆಳೆಯರ ಬಳಗ ಕಟ್ಟಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ತಂದೆಯವರು ಮಾಡಿದ ಸಾಧನೆಯನ್ನು ಮುಂದುವರೆಸಿದ ಗರಿಮೆ ಇವರದು. 89 ರ ಇಳಿ ವಯಸ್ಸಿನಲ್ಲಿಯೂ ಅವರು ಸಾಹಿತ್ಯ ಕ್ಷೇತ್ರದಿಂದ ದೂರಾಗಲಿಲ್ಲ.ಅವರ ಸಾಹಿತ್ಯಿಕ ಒಲವು ಅಗಾಧವಾಗಿತ್ತು ಎಂದು ಹೇಳಿದರು.
ಡಾ. ಡಿ ಎನ್ ಅಕ್ಕಿ, ಡಾ. ಎಂ ಎಂ ಪಡಶೆಟ್ಟಿ, ಚಿದಂಬರ ಬಂಡಗರ, ರಾಘವೇಂದ್ರ ಕುಲಕರ್ಣಿ, ಸಂತೋಷ ಬಂಡೆ,
ಶ್ರೀಧರ ಹಿಪ್ಪರಗಿ, ವೈ ಜಿ ಬಿರಾದಾರ, ಬಸವರಾಜ ಕಿರಣಗಿ, ರಾಚು ಕೊಪ್ಪ, ವಿದ್ಯಾ ಕಲ್ಯಾಣಶೆಟ್ಟಿ, ಶಿಲ್ಪಾ ಭಸ್ಮೆ, ನಿಂಗಣ್ಣ ಬಿರಾದಾರ, ಡಾ ರಾಜಶ್ರೀ ಮಾರನೂರ, ರವಿ ಅರಳಿ, ಡಾ ಕಾಂತು ಇಂಡಿ, ಆರ್ ವ್ಹಿ ಪಾಟೀಲ, ಸಂಗನಗೌಡ ಹಚ್ಚಡದ, ಅನಿತಾ ಅಳಗುಂಡಗಿ, ಅಣ್ಣರಾಯ ಗೂಗದಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಶಿಕ್ಷಕಿ ಸರೋಜಿನಿ ಮಾವಿನಮರ ಸ್ವಾಗತಿಸಿ,
ಪರಿಚಯಿಸಿದರು. ಶಿಕ್ಷಕಿ ಬಿ ಸಿ ಭಗವಂತಗೌಡರ ನಿರೂಪಿಸಿದರು.