ವಿಜಯಪುರ | ಆರೋಗ್ಯ ಸಂಪತ್ತು ಶ್ರೇಷ್ಠ ಸಂಪತ್ತು
ವಿಜಯಪುರ: ಆರೋಗ್ಯ ಸಂಪತ್ತು ಶ್ರೇಷ್ಠ ಸಂಪತ್ತು. ಇದನ್ನು ನಿಯಮಿತವಾಗಿ ಯೋಗ, ವ್ಯಾಯಾಮ, ಸಾತ್ವಿಕ ಆಹಾರ ಸೇವನೆ, ಸದ್ವಿಚಾರಗಳು ಮತ್ತು ದುಶ್ಚಟಗಳಿಂದ ದೂರವಿರುವುದರ ಮೂಲಕ ಪ್ರತಿಯೊಬ್ಬರೂ ಕಾಯ್ದುಕೊಳ್ಳಬೇಕು ಎಂದು ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿಯವರು ಹೇಳಿದ್ದಾರೆ.
ಗುರುಪೂರ್ಣಿಮೆಯ ಅಂಗವಾಗಿ ಇಂದು ಬುಧವಾರ ಮತ್ತು ನಾಳೆ ಗುರುವಾರ ನಗರದ ಜ್ಞಾನಯೋಗಾಶ್ರಮದಲ್ಲಿ, ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ವತಿಯಿಂದ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಬಿ. ಪಾಟೀಲ ಅವರ ಮಹತ್ವಾಕಾಂಕ್ಷೆಯ ಜಲ, ವೃಕ್ಷ, ಶಿಕ್ಷಣ, ಆರೋಗ್ಯ ಅಭಿಯಾನದ ಮುಖಾಂತರ ವಿಜಯಪುರ ಜಿಲ್ಲೆಯನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿರುವುದು ಶ್ಲಾಘನೀಯ. ಆಶ್ರಮದ ಜ್ಞಾನದಾಸೋಹದಂತೆ ಬಿ. ಎಲ್.ಡಿ.ಇ. ಆಸ್ಪತ್ರೆಯು ಸ್ವಾಸ್ಥ್ಯ ದಾಸೋಹ ನೀಡುತ್ತಿದೆ ಎಂದು ಅವರು ಪ್ರಶಂಸಿಸಿದರು.
ಶಿಬಿರದ ಸಂಚಾಲಕ ಮತ್ತು ಬಿ.ಎಲ್.ಡಿ.ಇ ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಮಾತನಾಡಿ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಣತಿಯಂತೆ, ಪ್ರತಿ ವರ್ಷ ಗುರುಪೂರ್ಣಿಮೆಯಂದು ಬಿ.ಎಲ್.ಡಿ.ಇ. ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಈ ಶಿಬಿರದಲ್ಲಿ ನಾನಾ ತಜ್ಞ ವೈದ್ಯರ ಸೇವೆಯ ಜೊತೆ ರಕ್ತದಲ್ಲಿನ ಸಕ್ಕರೆಯ ಅಂಶ, ಇಸಿಜಿ ತಪಾಸಣೆ ಮತ್ತು ಉಚಿತ ಔಷಧಿ ವಿತರಿಸಲಾಗುವುದು. ಹೆಚ್ಚಿನ ಚಿಕಿತ್ಸೆಗಾಗಿ ಬಿ.ಎಲ್.ಡಿ.ಇ. ಆಸ್ಪತ್ರೆಗೆ ಸಂಪರ್ಕಿಸಬಹುದು. ಒಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಂದು ಯೂನಿಟ್ ರಕ್ತದಾನ ಮಾಡಬಹುದು. ಇದರಿಂದ ಅವಶ್ಯವಿರುವ ಮೂರು ಜೀವಗಳಿಗೆ ಉಪಯೋಗವಾಗುತ್ತದೆ. ಅಲ್ಲದೇ, ರಕ್ತದಾನಿಗಳ ಆರೋಗ್ಯವೂ ವ್ರದ್ಧಿಸುತ್ತದೆ ಎಂದು ಹೇಳಿದರು.
ಈ ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ. ಸಂಜೀವ ಬೆಂಟೂರ, ಡಾ. ನಿಧಿ ಮಂಗಳವೇಡೆ, ಡಾ. ದಯಾನಂದ ಗಣ್ಣೂರ, ರಕ್ತನಿಧಿಯ ಡಾ. ಸತೀಶ ಅರಕೇರಿ, ಡಾ. ಭಾಗ್ಯಶಾಲಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಗ್ರಹವೈದ್ಯರು, ಸಹಾಯಕ ಸಿಬ್ಬಂದಿ ವಿನೋದ ಗಲಗಲಿ, ದೀಪಕ ಸಾವಂತ, ಶ್ರೀಶೈಲ ಕುಂಬಾರ, ಲಕ್ಷ್ಮಿ ಕುಂಬಾರ ಭಾಗವಹಿಸಿದ್ದರು. ಆಶ್ರಮದ ಭಕ್ತಮಂಡಳಿಯ ಪ್ರಕಾಶ ಕನ್ನೂರ, ಎಂ. ಎಂ. ಅಂಗಡಿ, ಎಂ. ಜಿ. ಹಳ್ಳದ ಮುಂತಾದವರು ಉಪಸ್ಥಿತರಿದ್ದರು.
BLDEA Aashram Health Camp
ಅಂಗವಾಗಿ ವಿಜಯಪುರ ನಗರದ ಜ್ಞಾನ ಯೋಗಾಶ್ರಮದಲ್ಲಿ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಅವರು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಮಂಜುನಾಥ.ಕೋಟೆಣ್ಣವರ, ಡಾ. ಸಂಜೀವ.ಬೆಂಟೂರ, ಡಾ. ಸತೀಶ.ಅರಕೇರಿ, ಡಾ. ದಯಾನಂದ ಗಣ್ಣೂರ ಮುಂತಾದವರು ಉಪಸ್ಥಿತರಿದ್ದರು.