ಮುಖ್ಯ ಮಂತ್ರಿ, ಉಪಮುಖ್ಯ ಮಂತ್ರಿ ರಾಜಿನಾಮೆಗೆ ಆಗ್ರಹ..! ಕಾರಣವೇನು..?
ಇಂಡಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜ್ಯ ಸರಕಾರದಿಂದ ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಲು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದೆ ಸಮಾರಂಭ ಆಯೋಜನೆ ಮಾಡಿದ್ದರಿಂದ ಕಾಲ್ತುಳಿತವಾಗಿ ೧೧ ಜನರ ಸಾವಿಗೆ ಕಾರಣವಾಗಿದ್ದು, ಕಾಂಗ್ರೆಸ್ ಸರ್ಕಾರ ತಕ್ಷಣ ಈ ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ರಾಜೀನಾಮೆ ಕೊಡಬೇಕೆಂದು ಭಾಜಪ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಮುಖಂಡ ಕಾಸುಗೌಡ ಬಿರಾದಾರ ಆಗ್ರಹಿಸಿದರು.
ಶುಕ್ರವಾರ ಭಾಜಪ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆರ್.ಸಿ.ಬಿ. ತಂಡ ೧೮ ವರ್ಷಗಳ ನಂತರ ಕಪ್ ಗೆದ್ದಿದ್ದು ಇಡೀ ರಾಜ್ಯಕ್ಕೆ ಖುಷಿ ತಂದಿದೆ. ಅವರನ್ನು ಅಭಿನಂದಿಸುವುದು ಸರಕಾರದ ಜವಾಬ್ದಾರಿ. ಆದರೆ ತರಾತುರಿಯಲ್ಲಿ ಯಾವುದೇ ಮುಂಜಾಗೃತ ಕ್ರಮ ತೆಗೆದುಕೊಳ್ಳದೇ ಸಮಾರಂಭ ಹಮ್ಮಕೊಂಡಿದ್ದರ ಪರಿಣಾಮ ೧೧ ಜನರ ಸಾವು ಹಾಗೂ ೩೦ ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಉತ್ತರ ಪ್ರದೇಶದಲ್ಲಿ ಜಗತ್ತೇ ಮೆತ್ತುವಂಥ ವಿಶ್ವವಿಖ್ಯಾತ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ೬೦ ಕೋಟಿ ಭಕ್ತರ ಮಹಾ ಸಮಾಗಮದಲ್ಲಿ ಕಾಲ್ತುಳಿತದ ಬಗ್ಗೆ ಸುಖಾ ಸುಮ್ಮನೆ ಮಾತನಾಡಿದ ತಾವು ಕೇವಲ ಒಂದು ಕ್ರೀಡಾಂಗಣ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ, ತಕ್ಷಣ ಇದರ ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಶಾಂತು ಕಂಬಾರ, ಸಂಜು ದಶವಂತ, ರಾಜಶೇಖರ ಯರಗಲ್, ಸೇರಿದಂತೆ ಇನ್ನಿತರರು ಇದ್ದರು.