ಎಸ್.ಟಿ.ಪಿ ನಿರ್ಮಾಣಕ್ಕೆ ರೂ.15 ಕೋಟಿ ಮಂಜೂರಿಸಲು ಶಾಸಕ ಯತ್ನಾಳ ಪತ್ರ
ವಿಜಯಪುರ: ನಗರದ ವಾರ್ಡ್ ನಂ.4 ರಲ್ಲಿ ಬರುವ ಭೂತನಾಳ ತಾಂಡಾದ ಹತ್ತಿರ 10 ಎಂ.ಎಲ್.ಡಿ ಸಾಮಾರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್.ಟಿ.ಪಿ) ನಿರ್ಮಾಣಕ್ಕೆ ಅಗತ್ಯವಾದ ರೂ.15 ಕೋಟಿ ಅನುದಾನ ಮಂಜೂರಿಸಲು ವಿಜಯಪುರ ನಗರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವಂತೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ವಿಜಯಪುರ ನಗರಕ್ಕೆ ಹೊಂದಿಕೊಂಡಿರುವ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.4 ರಲ್ಲಿ ಬರುವ ಭೂತನಾಳ ತಾಂಡಾ, ಚಂದು ನಗರ, ಸೇವಾಲಾಲ ನಗರ, ಸನ್ ಸಿಟಿ, ಸುಕೂನ್ ಕಾಲನಿಗಳಲ್ಲಿ ಸಾಕಷ್ಟು ಅಪಾರ್ಟಮೆಂಟ್ ಗಳು, ಆಸ್ಪತ್ರೆಗಳು ಹಾಗೂ ಇನ್ನೀತರಹದ ಜನವಸತಿ ಸಮುಚ್ಛಯಗಳು ನಿರ್ಮಾಣಗಳಾಗಿವೆ. ಅಲ್ಲಿನ ಸಾರ್ವಜನಿಕರಿಗೆ ತುಂಬಾ ದಿನಗಳಿಂದ ಒಳಚರಂಡಿ ನೀರು ಹರಿವಿನ ವ್ಯವಸ್ಥೆ ಕಲ್ಪಿಸುವುದು ಹಾಗೂ ಇಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡುವುದು ಸಹ ಅತ್ಯಂತ ಅಗತ್ಯ ಹಾಗೂ ಅನಿವಾರ್ಯವಾಗಿದೆ.
ಆದ್ದರಿಂದ ಭೂತನಾಳ ತಾಂಡಾದ ಹತ್ತಿರ ಇರುವ ಸರ್ಕಾರಿ ಜಮೀನಿನಲ್ಲಿ ಹೊಸ 10 ಎಂ.ಎಲ್.ಡಿ ಸಾಮಾರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಯ ಸಿ.ಎಸ್.ಆರ್ ದರದ ಪ್ರಕಾರ ಅಂದಾಜು ರೂ.15 ಕೋಟಿ ಅನುದಾನದ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಲಾಗಿದೆ. ಹೀಗಾಗಿ ವಿಜಯಪುರ ಜಿಲ್ಲೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುದಾನ ಮಂಜೂರಿಸಲು ಅನುಮೋದಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದೇ ವಿಷಯ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರಿಗೂ ಪತ್ರ ಬರೆಯಲಾಗಿದೆ ಎಂದು ನಗರ ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.