ರಾಯಚೂರು : ನಗರದ ಮಹತ್ವದ ೨೪x೭ ಕುಡಿವ ನೀರಿನ ಯೋಜನೆಯ ೨೮ ವಲಯಗಳಲ್ಲಿ ಫೆಬ್ರವರಿ ಅಂತ್ಯದ ವೇಳೆಗೆ ಕನಿಷ್ಟ ೧೦ ವಲಯಗಳಿಗೆ ನೀರು ಪೂರೈಕೆಯ ಕಾಮಗಾರಿ ಪೂರ್ಣಗೊಳಿಸದಿದ್ದರೇ, ಸಾಮಾನ್ಯ ಸಭೆಯಲ್ಲಿ ಗುತ್ತೇದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮತ್ತು ಕಪ್ಪು ಪಟ್ಟಿ ಸೇರ್ಪಡೆಗೆ ಠರಾವ್ ಸ್ವೀಕರಿಸಿ, ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ನಗರಸಭೆ ಎಚ್ಚರಿಸಿದೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನಗರಸಭೆ ಆಯುಕ್ತರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ನಗರ ೨೪x೭ ಕುಡಿವ ನೀರಿನ ಯೋಜನೆ ಟೆಂಡರ್ ಪ್ರಕ್ರಿಯೆ ೨೦೧೭ ರಲ್ಲಿ ಪೂರ್ಣಗೊಳಿಸಲಾಗಿತ್ತು. ಎಸ್.ಪಿ.ಎಂ.ಎಲ್. ಕಂಪನಿಗೆ ಗುತ್ತಿಗೆ ನೀಡಲಾಗಿದೆ. ೨೦೧೯ ಕ್ಕೆ ೧೮ ವಲಯಗಳಲ್ಲಿ ೨೪x೭ ಕಾಮಗಾರಿ ಪೂರ್ಣಗೊಳಿಸಲು ೯೮ ಕೋಟಿ ರೂ. ಗುತ್ತಿಗೆ ವಹಿಸಿಕೊಡಲಾಗಿತ್ತು.
ಆದರೆ, ೨೦೨೨ ನೇ ವರ್ಷ ಬಂದರೂ, ಇಲ್ಲಿವರೆಗೂ ನಗರದಲ್ಲಿ ೨೪x೭ ಕುಡಿವ ನೀರಿನ ಯೋಜನೆಯ ಹನಿ ನೀರು ಸಹ ಇಲ್ಲಿಯ ಜನ ಬಳಸದಿರುವುದು ಈ ಕಾಮಗಾರಿಯ ಭ್ರಷ್ಟಾಚಾರಕ್ಕೆ ನಿದರ್ಶನವಾಗಿದೆ.
೯೮ ಕೋಟಿ ಯೋಜನೆಯಲ್ಲಿ ಈಗಾಗಲೇ ೬೮ ಕೋಟಿ ರೂ. ಬಿಲ್ ಪಾವತಿಸಲಾಗಿದೆ. ಸುಮಾರು ೯ ಸಲ ಕಾಮಗಾರಿ ಪೂರ್ಣಗೊಳಿಸುವ ಅವಧಿ ವಿಸ್ತೀರ್ಣ ಅವಕಾಶ ಪಡೆದರೂ, ಸಂಬಂಧಪಟ್ಟ ಎಸ್.ಪಿ.ಎಂ.ಎಲ್. ಕಂಪನಿಯೂ ಈ ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಸರಿಸುಮಾರು ೧೦೦ ಕೋಟಿ ಯೋಜನೆ ಅನುಷ್ಠಾನ ನಂತರವೂ ಜಿಲ್ಲೆ ೨೪x೭ ಕುಡಿವ ನೀರಿನ ಭಾಗ್ಯದಿಂದ ವಂಚಿತಗೊಂಡು ೪೮ ಘಂಟೆಗೆ ಒಂದು ಸಲ ನೀರು ಪೂರೈಕೆಯ ವ್ಯವಸ್ಥೆಯ ಶಾಪಕ್ಕೆ ಗುರಿಯಾಗುವಂತೆ ಮಾಡಿದೆ.
ಕಳೆದ ಐದು ವರ್ಷದಿಂದ ಈ ಕಾಮಗಾರಿ ನಡೆಯುತ್ತಲೇ ಇದ್ದರೂ, ದಾಖಲೆಗಳಲ್ಲಿ ಮಾತ್ರ ೨೪x೭ ಕುಡಿವ ನೀರಿನ ಯೋಜನೆ ಪೂರ್ಣಗೊಂಡಿದೆಂದು ಘೋಷಿಸಿದ್ದರ ಪರಿಣಾಮ ೧೫ ನೇ ಹಣಕಾಸು ಯೋಜನೆಯಡಿ ವಾರ್ಷಿಕ ಕುಡಿವ ನೀರು ನಿರ್ವಹಣಾ ಶೇ.೩೦ ರಷ್ಟು ವೆಚ್ಚಕ್ಕೆ ಕಡಿವಾಣ ಬೀಳುವುದಕ್ಕೆ ಕಾರಣವಾಗಿದೆ. ನಿನ್ನೆ ಸಂಜೆ ಔಪಚಾರಿಕವಾಗಿ ಸಭೆ ಸೇರಿದ ನಗರಸಭೆ ಸದಸ್ಯರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಒಂದೆಡೆ ೨೪x೭ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಮತ್ತೊಂದೆಡೆ ಕುಡಿವ ನೀರು ವಾರ್ಷಿಕ ನಿರ್ವಹಣೆಗೆ ಅನುದಾನ ನೀಡದಿದ್ದರೇ ನಗರದ ಮೂರು ಲಕ್ಷ ಜನರಿಗೆ ತುರ್ತು ಪರಿಸ್ಥಿತಿಯಲ್ಲಿ ದುರಸ್ತಿ ಕಾಮಗಾರಿಯ ಮೂಲಕ ನೀರು ಪೂರೈಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿ, ೨೪x೭ ಯೋಜನೆ ಅನುಷ್ಠಾನ ವೈಫಲ್ಯದ ವಿರುದ್ಧ ಕಾನೂನು ರೀತಿ ಕ್ರಮ ಸೇರಿದಂತೆ ಕುಡಿವ ನೀರು ಯೋಜನೆ ನಿರ್ವಹಣೆಗೆ ಶೇ.೩೦ ರಷ್ಟು ಹಣ ಒದಗಿಸುವ ಬಗ್ಗೆ ಮನವಿ ಮಾಡಲು ನಿರ್ಧರಿಸಲಾಯಿತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ೨೪x೭ ಯೋಜನೆಯಡಿ ಗುತ್ತೇದಾರರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಎಡಿಬಿ ಅಧಿಕಾರಿಗಳು ಕೂಟ ನೂರಾರು ಕೋಟಿ ಹಣ ಅವ್ಯವಹಾರ ಮಾಡಿರುವುದು ಸ್ಪಷ್ಟಗೊಂಡಿದೆ.
ನಗರದ ೩ ಲಕ್ಷ ಜನರ ದಾಹ ತೀರಿಸುವ ಮಹತ್ವದ ಈ ಯೋಜನೆ ಐದು ವರ್ಷದಿಂದ ಪೂರ್ಣಗೊಳ್ಳದಿದ್ದರೂ, ಈ ಬಗ್ಗೆ ಯಾರು ಧ್ವನಿಯೆತ್ತದಿರುವುದು ಇವರ ಜನಪರ ಕಾಳಜಿಯನ್ನೇ ಸಂಶಯಿಸುವಂತೆ ಮಾಡಿದೆ.
ಕೃಷ್ಣಾ ಮತ್ತು ತುಂಗಭದ್ರಾ ಎರಡು ನದಿಗಳ ಮಧ್ಯೆ ಇರುವ ನಗರಕ್ಕೆ ದಿನ ಬಿಟ್ಟು ದಿನ ನೀರು ಪಡೆಯುವ ದೌರ್ಭಾಗ್ಯಕ್ಕೆ ಯಾರು ಕಾರಣ? ೨೪x೭ ಯೋಜನೆಗೆ ಬಂದ ೧೦೦ ಕೋಟಿ ಹಣ ನುಂಗಿ ನೀರು ಕುಡಿದಿದ್ದು ಯಾರು? ಮುಖ್ಯ ಗುತ್ತೇದಾರರಿಂದ ಉಪ ಗುತ್ತಿಗೆ ಪಡೆದು ಶೇ.೨೦, ೩೦ ರಷ್ಟು ಕಮಿಷನ್ ಆಧಾರವಾಗಿ ಮನಬಂದಂತೆ ಈ ಕಾಮಗಾರಿಯನ್ನು ಹಂಚಿಕೆ ಮಾಡಿದ ಪರಿಣಾಮ ಇಂದು ಮೂರು ಲಕ್ಷ ಜನ ೨೪x೭ ಕುಡಿವ ನೀರಿನ ಯೋಜನೆಯಿಂದ ವಂಚಿತಗೊಳ್ಳುವಂತಾಗಿದ್ದು, ಇದಕ್ಕೆ ಯಾರು ಹೊಣೆ?. ಈ ಎಲ್ಲಾ ಪ್ರಶ್ನೆಗಳಿಗೆ ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳೇ ಉತ್ತರ ನೀಡಬೇಕಾಗಿದೆ.
೨೪x೭ ಕುಡಿವ ನೀರಿನ ಯೋಜನೆ ಸಂಪೂರ್ಣ ಹಸ್ತವ್ಯಸ್ತವಾಗಿದೆ. ೨೮ ವಲಯಗಳಲ್ಲಿ ಮನೆಗೆ ಸಂಪರ್ಕ ನೀಡಿದ ಪೈಪ್ ಲೈನ್‌ಗೂ ನೀರು ಪೂರೈಸುವ ರೈಜಿಂಗ್ ಮೆನ್ ಪೈಪ್‌ಗೂ ಸಂಬಂಧವೇ ಇಲ್ಲದ ರೀತಿಯಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ. ಬಿಲ್ ಎತ್ತುವಳಿಗೆ ಮೀಟರ್ ಅಳವಡಿಸಿದ ಗುತ್ತೇದಾರರು ಮತ್ತು ಉಪ ಗುತ್ತೇದಾರರು ಬಿಲ್ ಎತ್ತುವಳಿ ನಂತರ ಅದೇ ಮೀಟರ್‌ಗಳನ್ನು ಬಿಚ್ಚಿಕೊಂಡು ಮತ್ತೊಂದುಕಡೆ ಅಳವಡಿಸಿ, ಬಿಲ್ ಎತ್ತುವಳಿ ಮಾಡಿದಂತಹ ಉದಾಹರಣೆಗಳಿವೆ. ೨೮ ವಲಯಗಳಲ್ಲಿ ಕೃಷ್ಣದೇವರಾಯ ನಗರ ವಲಯದಲ್ಲಿ ೨೪x೭ ಕುಡಿವ ನೀರಿನ ಯೋಜನೆ ಪೂರ್ಣಗೊಳಿಸಲಾಗಿದೆಂದು ವರದಿಯಲ್ಲಿ ದಾಖಲಿಸಲಾಗಿದೆ.
ಆದರೆ, ಈ ವಲಯದಲ್ಲೂ ಸಹ ನೀರು ಪೂರೈಕೆಯಾಗುತ್ತಿಲ್ಲ. ಮತ್ತು ಶೇ.೯೦ ರಷ್ಟು ಮೀಟರ್‌ಗಳೇ ಇಲ್ಲದಿರುವುದು ಶತಕೋಟಿ ಯೋಜನೆಯ ಲೂಟಿಗೆ ಸಾಕ್ಷಿಯಾಗಿದೆ. ಉದ್ದೇಶಿತ ಯೋಜನೆಗೆ ಏಷ್ಯಿಯನ್ ಡೆವಲಪಮೆಂಟ್ ಬ್ಯಾಂಕಿನಿಂದ ಸಹಾಯಧನ ಪಡೆಯಲಾಗಿದೆ. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಈ ಬಡ್ಡಿ ಮೊತ್ತವನ್ನು ಸರ್ಕಾರ ಭರಿಸುವುದಕ್ಕೂ ಇಲ್ಲಿಯ ಆಡಳಿತ ವ್ಯವಸ್ಥೆ ಕಾರಣವಾಗಿದೆ. ೧೧-೦೨-೨೦೨೨ ರಂದು ನಗರಸಭೆ ಆಯುಕ್ತ ಕೆ.ಮುನಿಸ್ವಾಮಿ ಅವರು ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ಕೋಶ (ಎಡಿಬಿ) ಕಾರ್ಯ ಪಾಲಕ ಅಭಿಯಂತರರಿಗೆ ಪತ್ರ ಬರೆದು, ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವುದಕ್ಕೆ ಸಂಬಂಧಿಸಿ ಸಲ್ಲಿಸಿರುವ ಯಾದಿಗೆ ಸಂಬಂಧಿಸಿ ಪುನಃ ಸ್ಥಳಕ್ಕೆ ಭೇಟಿ ನೀಡಿ, ಕೂಲಂಕುಷವಾಗಿ ಪರಿಶೀಲಿಸಿ, ಸ್ಪಷ್ಟ ಅಭಿಪ್ರಾಯದೊಂದಿಗೆ ದಿನಾಂಕ ೧೪ ರೊಳಗೆ ಧೃಡೀಕರಣ ಪತ್ರ ಸಲ್ಲಿಸಲು ಸೂಚಿಸಿದ್ದಾರೆ. ೨೪x೭ ಕುಡಿವ ನೀರಿನ ಯೋಜನೆ ಕಾಮಗಾರಿಯ ಕರ್ಮಕಾಂಡದ ಬಗ್ಗೆ ಈಗ ಒಂದೊಂದು ಸತ್ಯ ಬಹಿರಂಗಗೊಳ್ಳಲಿದೆ.