ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಗ್ಯಾರಂಟಿ ಯೋಜನೆಗಳ ಕುರಿತು ವ್ಯಾಪಕ ಪ್ರಚಾರಕ್ಕೆ ಸೂಚನೆ
ವಿಜಯಪುರ : ಮಾ-25 : ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಗಳ ಲಾಭ ದೊರಕಿಸಲು ಯೋಜನೆಗಳ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವ್ಯಾಪಕವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಇಲಿಯಾಸ್ ಬೋರಾಮಣಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರದ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಶಕ್ತಿ ಯೋಜನೆಯಡಿ ಜಿಲ್ಲೆಗೆ ಹೆಚ್ಚುವರಿ ಬಸ್‍ಗಳನ್ನು ಬೇಡಿಕೆಗಾಗಿ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚಿಸಲಾಗುವುದು. 5 ಗ್ಯಾರಂಟಿ ಯೋಜನೆಗಳ ವ್ಯಾಪಕ ಪ್ರಚಾರ ಹಮ್ಮಿಕೊಳ್ಳುವಂತೆ ಅವರು ತಿಳಿಸಿದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 11.42 ಕೋಟಿ ಮಹಿಳೆಯರು ಮತ್ತು ಮಕ್ಕಳು ಉಚಿತವಾಗಿ ಪ್ರಯಾಣಿಸಿದ್ದು, 359.22 ಕೋಟಿ ರೂ. ವೆಚ್ಚವಾಗಿದೆ. ಇನ್ನೂ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ, ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಹೋಗಲು ಹೆಚ್ಚವರಿ ಬಸ್ಸುಗಳನ್ನು ಓಡಿಸಲು ಮತ್ತು ಅಂತರ ರಾಜ್ಯಗಳಿಗೆ ಹೊಂದಿಕೊಂಡಿರುವ ಗ್ರಾಮಗಳಿಗೆ ಬಸ್ಸುಗಳ ನಿಲುಗಡೆ ಮಾಡಲು ಅಗತ್ಯ ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಸಭೆಗೆ ಮಾಹಿತಿ ನೀಡಿ, ಶಕ್ತಿ ಯೋಜನೆಯಡಿ ಸಾಧಿಸಲಾದ ಪ್ರಗತಿ ಹಾಗೂ ಜಿಲ್ಲೆಯಿಂದ ಬೆಂಗಳೂರಿಗೆ ಅಮೋಘವರ್ಷ ಹಾಗೂ ಕಲ್ಯಾಣ ರಥ ಬಸ್ಸು ಸೇವೆ ಆರಂಭಿಸಲಾಗಿದ್ದು, ಈ ಬಸ್ಸುಗಳಿಂದ ಸಾರ್ವಜನಿಕರಿಗೆ ಕಲ್ಪಿಸಲಾದ ಅನುಕೂಲತೆಗೆ ಕೇಂದ್ರ ಸರ್ಕಾರದಿಂದ ಬಹುಮಾನ ನೀಡಲಾಗಿದೆ. ಜಿಲ್ಲೆಗೆ ಒದಗಿಸಲಾಗುವ ಹೆಚ್ಚುವರಿ ಬಸ್‍ಗಳನ್ನು ಒದಗಿಸಿದ್ದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಶಿಫಾರಸ್ಸಿನ ಮೇರೆಗೆ ಅವಶ್ಯಕತೆ ಇರುವ ಕಡೆ ಹೆಚ್ಚುವರಿ ಬಸ್‍ಗಳ ವ್ಯವಸ್ಥೆ ಹಾಗೂ ಬಸ್ ನಿಲ್ದಾಣಗಳಲ್ಲಿರುವ ಆವರಣ ಮತ್ತು ಶೌಚಾಲಯಗಳಲ್ಲಿ ಸ್ವಚ್ಛತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಗೃಹ ಜ್ಯೋತಿ ಯೋಜನೆಯಡಿ ಈವರೆಗೆ 4,38,378 ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದು, ಈವರೆಗೆ ಒಟ್ಟು ರೂ. 337.27 ಕೋಟಿಗಳು ವೆಚ್ಚವಾಗಿದೆ. ಅರ್ಹ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ, ಅನ್ನಭಾಗ್ಯ ಯೋಜನೆಯಡಿ ಹಣದ ಬದಲಾಗಿ ಸಂಪೂರ್ಣವಾಗಿ ಉಚಿತವಾಗಿ 10 ಕೆ.ಜಿ. ಅಕ್ಕಿ ವಿತರಣೆ, ಗೃಹಲಕ್ಷ್ಮೀ ಯೋಜನೆಯಡಿ ಡಿಬಿಟಿ ಮೂಲಕ ಅಕ್ಟೋಬರ 2024ರ ವರೆಗೆ ರೂ. 2000/- ನೋಂದಾಯಿತ ಫಲಾನುಭವಿಗಳಿಗೆ ಸಹಾಯ ಧನ ವಿತರಣೆ, ಯುವನಿಧಿ ಯೋಜನೆಯಡಿ ಜನೆವರಿ 2025 ಅಂತ್ಯದ ವರೆಗೆ ನೋಂದಾಯಿತ ಪದವೀಧರ ಹಾಗೂ ಡಿಪೆÇ್ಲೀಮಾ ನಿರುದ್ಯೋಗಿ ಯುವಕರಿಗೆ ರೂ. 3000/- ಹಾಗೂ 1500/- ಗಳಂತೆ ಸಹಾಯ ಧನವನ್ನು ಡಿಬಿಟಿ ಮೂಲಕ ವಿತರಿಸಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಅರ್ಹ ಫಲಾನುವಿಗಳಿಗೆ ಲಾಭ ದೊರಕಿಸಲಾಗುತ್ತಿದ್ದು, ಗ್ಯಾರಂಟಿ ಯೋಜನೆಯಡಿ ಸಂಬಂಧಿಸಿದ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿ ಬರುವಂತೆ ಪ್ರಯತ್ನ ಮಾಡಬೇಕೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಉಪಾದ್ಯಕ್ಷರುಗಳಾದ ಸುಂದರಪಾಲ ರೂಪಸಿಂಗ ರಾಠೋಡ, ನಬಿಲಾಲ ಶಾಬುದ್ದೀನ ನಾಯ್ಕೋಡಿ, ಆನಂದ ಜಾಧವ ಹಾಗೂ ಮಹಾದೇವಿ ಅಶೋಕ ಗೋಕಾಕ ಸೇರಿದಂತೆ ವಿವಿಧ ಸದಸ್ಯರು, ಸೇರಿದಂತೆ 5 ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತಿ ಯೋಜನಾ ಮತ್ತು ಅಂದಾಜು ಮೌಲ್ಯಮಾನಪನಾಧಿಕಾರಿ ಎ.ಬಿ.ಅಲ್ಲಾಪುರ ವಂದಿಸಿದರು.