ಬಡ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯ : ಮುರುಘೇಂದ್ರ ಶ್ರೀಗಳು
ಇಂಡಿ: ಪಟ್ಟಣದ ವಿದ್ಯಾನಗರದಲ್ಲಿ ಬರುವ ಮಾರ್ಚ ೧೮ ರಂದು ತಾಲ್ಲೂಕಿನ ಶಿರಶ್ಯಾಡ ಗ್ರಾಮದ ಮುರುಘೇಂದ್ರ ಶ್ರೀಗಳ ನೇತೃತ್ವದಲ್ಲಿ ಬಡ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಮುರುಘೇಂದ್ರ ಶ್ರೀಗಳು ಪ್ರಸಾದ ನಿಲಯ ಕಟ್ಟಡಕ್ಕೆ ಭಕ್ತರ ಸಲಹೆ ಸೂಚನೆ ಕೇಳಲು ಭಾನುವಾರ ಇಂಡಿ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮುರುಘೇಂದ್ರ ಶ್ರೀಗಳು ಮಾತನಾಡಿ, ಇಂಡಿ ಪಟ್ಟಣದ ಮಧ್ಯಭಾಗದಲ್ಲಿ ಪುರಸಭೆಯ ಹಿಂದಿನ ಅಧ್ಯಕ್ಷ ಕಾಸೂಗೌಡ ಬಿರಾದಾರ ಅವರು ಮುರುಘೇಂದ್ರ ಮಠಕ್ಕೆ ಸ್ಥಳವಕಾಶ ಮಾಡಿಕೊಟ್ಟಿದ್ದಾರೆ. ಆ ಸ್ಥಳದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯ ಸ್ಥಾಪನೆ ಮಾಡಬೇಕೆಂಬ ಸಂಕಲ್ಪ ಮಾಡಿ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ, ಸರ್ಕಾರ ನಮ್ಮ ಮನವಿಯನ್ನು ಮಾನ್ಯ ಮಾಡಿ ೫೦ ಲಕ್ಷ ಅನುದಾನ ಮಂಜೂರಿ ಮಾಡಿದೆ. ಆ ಅನುದಾನವನ್ನು ಭಕ್ತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿದ್ದ ಸಿದ್ದಸಿರಿ ಬ್ಯಾಂಕಿನ ನಿರ್ದೇಶಕ ಜಗದೀಶ ಕ್ಷತ್ರಿ ಮಾತನಾಡಿ, ಉಚಿತ ಪ್ರಸಾದ ನಿಲಯದ ಕಟ್ಟಡಕ್ಕೆ ಸ್ಥಳೀಯ ಮುಖಂಡರ ಒಂದು ಕಮೀಟಿ ಮಾಡಿ ಅದರ ಅಡಿಯಲ್ಲಿ ಕೆಲಸ ಪ್ರಾರಂಭಿಸಬೇಕೆAದು ಸೂಚಿಸಿದರು. ಈ ಸಮಿತಿಗೆ ಬಿಜೆಪಿಯ ಮುಖಂಡ ಕಾಸೂಗೌಡ ಬಿರಾದಾರ, ಅನೀಲಪ್ರಸಾದ ಏಳಗಿ, ಉದ್ಯಮಿ ಅನಂತ ಜೈನ, ಜಗದೀಶ ಕ್ಷತ್ರಿ, ಪುರಸಭೆಯ ಅಧ್ಯಕ್ಷ ಲಿಂಬಾಜಿ ರಾಠೋಡ ಮುಂತಾದ ೨೧ ಜನರ ಕಮೀಟಿ ನೇಮಕ ಮಾಡಲಾಯಿತು.
ಸಭೆಯಲ್ಲಿ ಕಾಸೂಗೌಡ ಬಿರಾದಾರ, ಜಗದೀಶ ಕ್ಷತ್ರಿ, ಪ್ರಭು ಹೊಸಮನಿ, ದೇವೇಂದ್ರ ಕುಂಬಾರ, ಲಿಂಬಾಜಿ ರಾಠೋಡ ಮಾತನಾಡಿ, ಉಚಿತ ಪ್ರಸಾದ ನಿಲಯದ ಕಟ್ಟಡದ ಕೆಲಸಕ್ಕೆ ಸಹಾಯ ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಮಾರ್ಚ ೧೮ ರಂದು ಮುರುಘೇಂದ್ರ ಶ್ರೀಗಳ ೩೮ನೇ ಹುಟ್ಟುಹಬ್ಬವಿದೆ. ಭೂಮಿ ಪೂಜೆಯ ನಂತರ ಸಾಯಂಕಾಲ ಮುರುಘೇಂದ್ರ ಶ್ರೀಗಳ ೩೮ನೇ ಹುಟ್ಟುಹಬ್ಬ ಆಚರಿಸುವಂತೆ ಭಕ್ತರು ಸೂಚನೆ ನೀಡಿದರು. ಅದಕ್ಕೆ ಸಭೆ ಒಪ್ಪಿಕೊಂಡು ನಾಡಿನ ಹೆಸರಾಂತ ಪೂಜ್ಯರನ್ನು ಕರೆಸಿ ಮುರುಘೇಂದ್ರ ಶ್ರೀಗಳ ಹುಟ್ಟುಹಬ್ಬ ಆಚರಿಸಲು ಸಭೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.
ಇಂಡಿ: ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮುರುಘೇಂದ್ರ ಶ್ರೀಗಳು ಮಾತನಾಡಿದರು. ಜೈನಾಪೂರದ ಗುರುಪಾದೇಶ್ವರ ಶ್ರೀಗಳು ಆಶಿರ್ವಚನ ನೀಡಿದರು.