ರಸ್ತೆ ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ-ಮಹೇಶ ಸಂಖ
ಇಂಡಿ: ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವದರಿಂದ ರಸ್ತೆ ಸುರಕ್ಷತೆಯು ಬಹಳ ಮುಖ್ಯವಾಗಿದ್ದು, ನಾವು ಸಂಚಾರ ನಿಯಮ ಮತ್ತು ಕಾನೂನುಗಳನ್ನು ಅನುಸರಿಸಿದಾಗ ನಮ್ಮ ಕುಟುಂಬಗಳನ್ನು ರಸ್ತೆ ಅಪಘಾತಗಳಿಂದ ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಇಂಡಿ ಗ್ರಾಮೀಣ ಪಿ ಎಸ್ ಐ ಮಹೇಶ ಸಂಖ ಹೇಳಿದರು.
ಮಂಗಳವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಗಳ ವತಿಯಿಂದ ಹಮ್ಮಿಕೊಂಡ ‘ರಸ್ತೆ ಸುರಕ್ಷತೆ-ಕಾನೂನು ಅರಿವು ಕಾರ್ಯಕ್ರಮ’ವನ್ನು ಉದ್ಘಾಟಿಸಿ ಆವರು ಮಾತನಾಡಿದರು.
18 ವರ್ಷದೊಳಗಿನ ಮಕ್ಕಳು ವಾಹನ ಚಾಲನೆ ಮಾಡುವುದು ಅಪರಾಧವಾಗಿದ್ದು, ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ರಸ್ತೆ ಸುರಕ್ಷತೆಯು ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ರಸ್ತೆ ಸುರಕ್ಷತೆ ನಿಯಮಗಳು ಮತ್ತು ಕ್ರಮಗಳ ಬಗ್ಗೆ ಚೆನ್ನಾಗಿ ಅರಿವು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ಷಣಾತ್ಮಕ ಚಾಲನೆಯ ಅಭ್ಯಾಸ, ಸುರಕ್ಷತಾ ಕ್ರಮಗಳ ಬಳಕೆ, ವೇಗದ ಮಿತಿಯ ನಿರ್ವಹಣೆ, ರಸ್ತೆ ಚಿಹ್ನೆಗಳ ಅರ್ಥಮಾಡಿಕೊಳ್ಳುವಿಕೆಗಳಂತಹ ಎಲ್ಲಾ ನಿಯಮಗಳನ್ನು ನಾವು ಅನುಸರಿಸಿದಾಗ ಮಾತ್ರ ರಸ್ತೆ ಅಪಘಾತ ಕಡಿಮೆ ಮಾಡಲು ಸಾಧ್ಯ ಎಂದು ಹೇಳಿದರು.
ಬಿ ಆರ್ ಪಿ ಅಧಿಕಾರಿಗಳಾದ ಬಸವರಾಜ ಗೊರನಾಳ, ಅಶೋಕ ರಾಠೋಡ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವ್ಹಿ ವೈ ಪತ್ತಾರ, ಎಸ್ ಎಸ್ ಅರಬ, ಸಾವಿತ್ರಿಬಾಯಿ ಫುಲೆ
ಶಿಕ್ಷಕಿಯರ ಸಂಘದ ತಾಲೂಕ ಅಧ್ಯಕ್ಷೆ ಮಲ್ಲಮ್ಮ ಗಿರಣಿವಡ್ಡರ ಹಾಗೂ ಶಾಲಾ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.
ಶಿಕ್ಷಕ ಎಸ್ ಆರ್ ಚಾಳೇಕರ ಕಾರ್ಯಕ್ರಮ ನಿರ್ವಹಿಸಿದರು.