ತೊಗರಿಗೆ ಕ್ವಿಂ ₹ 12 ಸಾವಿರ ದರಕ್ಕೆ ಆಗ್ರಹಿಸಿ ಪ್ರತಿಭಟನೆ
ವಿಜಯಪುರ : ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ನಾಡಕಚೇರಿಯ ಆವರಣದಲ್ಲಿ ರೈತ ಬಾಂಧವರು ತೊಗರಿ ಬೆಲೆ ದಿಢೀರನೆ ಕಡಿಮೆಯಾಗಿರುವದನ್ನು ಖಂಡಿಸಿ ತೊಗರಿಯನ್ನು ನೆಲಕ್ಕೆ ಚೆಲ್ಲಿ ಕೇಂದ್ರ ಸರ್ಕಾರ ತೊಗರಿ ಬೆಲೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಪ್ರಧಾನಮಂತ್ರಿ ಅವರಿಗೆ ಬರೆದ ಮನವಿಯನ್ನು ಉಪತಹಸೀಲ್ದಾರ ಮೂಲಕ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕಳೆದ ಐದಾರು ತಿಂಗಳ ಹಿಂದೆ ಪ್ರತಿ ಕ್ವಿಂಟಾಲ್‌ಗೆ ರೂ. ೧೨ ಸಾವಿರ ಇದ್ದ ದರವನ್ನು ಕೇಂದ್ರ ಸರ್ಕಾರ ದಿಢೀರನೆ ದರ ಕಡಿಮೆ ಮಾಡಿ ಪ್ರತಿ ಕ್ವಿಂಟಾಲ್‌ಗೆ ರೂ. ೭,೫೫೦ ನಿಗದಿ ಮಾಡುವ ಮೂಲಕ ರೈತರನ್ನು ಬೀದಿಗೆ ತಳ್ಳುವ ಕೆಲಸ ಕೇಂದ್ರ ಸರ್ಕಾರ ಮಾಡಲು ಹೊರಟಿದೆ. ರೈತರು ಬೆಳೆದ ಯಾವುದೇ ಬೆಳೆಯ ಫಸಲನ್ನು ಕೇಂದ್ರ ಸರ್ಕಾರ ಖರೀದಿಸಲು ಮುಂದಾದ ಸಂದರ್ಭದಲ್ಲಿ ಬೆಲೆ ನಿಗದಿಪಡಿಸುವಾಗ ರೈತರೊಂದಿಗೆ ಚರ್ಚಿಸಿ ರೈತರ ಸಲಹೆ ಮೇರೆಗೆ ದರ ನಿಗದಿಪಡಿಸಬೇಕು. ರೈತರು ಬೆಳೆ ಬೆಳೆಯಲು ಸಾಕಷ್ಟು ಶ್ರಮಿಸುವ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಖರ್ಚು ಮಾಡುತ್ತಾರೆ. ಇದನ್ನು ಪರಿಗಣಿಸಿ ಬೆಳೆಗಳಿಗೆ ಯೋಗ್ಯ ಮಾರುಕಟ್ಟೆ ದರ ನಿಗದಿಪಡಿಸುವಂತಾಗಬೇಕು. ಇದೀಗ ವಿದೇಶದಿಂದ ತೊಗರಿಯನ್ನು ಉದ್ದೇಶಪೂರ್ವಕವಾಗಿ ಆಮದು ಮಾಡಿಕೊಂಡು ತೊಗರಿ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಇದರಿಂದಾಗಿ ರೈತರಿಗೆ ಅನ್ಯಾಯವಾಗಿದೆ ಎಂದರು.
ಕೇಂದ್ರ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡುವ ಬದಲಾಗಿ ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತರ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುವಂತಾಗಬೇಕು. ಕೂಡಲೇ ಕೇಂದ್ರ ಸರ್ಕಾರ ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ ಮೊದಲಿದ್ದ ರೂ. ೧೨ ಸಾವಿರ ದರಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಠ್ಠಲ ಬಿರಾದಾರ, ಹೊನಕೇರೆಪ್ಪ ತೆಲಗಿ, ಚನ್ನಬಸಪ್ಪ ಸಿಂಧೂರ, ಹಣಮಂತರಾಯ ಗುಣಕಿ, ಮಲ್ಲನಗೌಡ ನಾಡಗೌಡ, ಗುರುಸಂಗಪ್ಪ ಶಿವಯೋಗಿ, ಮಹೇಶ ಯಡಳ್ಳಿ, ಭಾಗಪ್ಪ ನಾಟೀಕಾರ, ದಾವುಲಸಾಬ ನದಾಫ್, ಹಣಮಂತ ಮುರಾಳ, ಗಿರಿಮಲ್ಲಪ್ಪ ದೊಡಮನಿ, ಬಸವರಾಜ ಚೌಧರಿ, ಭೀಮನಗೌಡ ಪಾಟೀಲ, ಲಂಕೇಶ ತಳವಾರ, ಬಂಗೆಪ್ಪ ಸಾಸನೂರ, ನಿಂಗಣ್ಣ ನಾಡಗೌಡ, ಸಿದ್ದು ಮೇಟಿ, ರ್‍ಯಾಬಪ್ಪಗೌಡ ಪುಲೇಶಿ, ರಾಜೇಸಾಬ ವಾಲೀಕಾರ, ಬಂದಗೀಸಾ ಹಳ್ಳೂರ, ಲಕ್ಷ್ಮಣ ಚೌಧರಿ, ಶ್ರೀಶೈಲ ಮಾಳೂರ, ಈರಯ್ಯ ಹಿರೇಮಠ, ಶರಣಬಸಪ್ಪ ಹಾದಿಮನಿ, ಗುರುಲಿಂಗಪ್ಪ ಪಡಸಲಗಿ, ಈರಣ್ಣ ಬ್ಯಾಕೋಡ, ಪ್ರಕಾಶ ಶಂಕ್ರೆಪ್ಪಗೋಳ, ವೀರಭದ್ರಯ್ಯ ಜಂಗಿನಗಡ್ಡಿ, ಎಸ್.ಎಸ್.ಬೂದಿಹಾಳ, ಅರವಿಂದ ಬ್ಯಾಕೋಡ, ಮಹಾಂತೇಶ ಕೋರಿ, ಮಲ್ಲಪ್ಪ ಮಾದರ ಸೇರಿದಂತೆ ಇತರರು ಭಾಗವಹಿಸಿದ್ದರು.