ಭಾರತೀಯ ಶಿಕ್ಷಣದ ಪ್ರವರ್ತಕ ಆಜಾದ್-ಸಂತೋಷ ಬಂಡೆ
ಇಂಡಿ: ಭಾರತೀಯ ಶಿಕ್ಷಣದ ಪ್ರವರ್ತಕ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಸ್ವಾತಂತ್ರ್ಯ ಹೋರಾಟಗಾರ, ಚಿಂತಕ ಮತ್ತು ಶಿಕ್ಷಣತಜ್ಞರಾಗಿ ನೀಡಿದ ಕೊಡುಗೆಗಳು ಇಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಸೋಮವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷಣ ದಿನ ಹಾಗೂ ಒನಕೆ ಓಬವ್ವ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.
ಓಬವ್ವ ಸ್ವಾಮಿನಿಷ್ಠೆ, ಸಮಯ ಸ್ಫೂರ್ತಿ ಮತ್ತು ತ್ಯಾಗದ ತ್ರಿವೇಣಿ ಸಂಗಮ. ಬಾಲ್ಯದಿಂದಲೂ ಸಂಕಷ್ಟಗಳ ಅನುಭವಗಳೊಂದಿಗೆ ಅನನ್ಯವಾದ ಸಂಸ್ಕಾರಗಳನ್ನು ರೂಢಿಸಿಕೊಂಡ ಓಬವ್ವಳ ದೇಶಭಕ್ತಿಯನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು.
ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ, ಆಜಾದ್ ಅವರು ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೊಳಿಸುತ್ತಾ, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ವಯಸ್ಕರ ಶಿಕ್ಷಣಕ್ಕೂ ಪ್ರಾಮುಖ್ಯತೆ ನೀಡಿದ್ದರು. ಅವರು ಸಮಕಾಲೀನ ಭಾರತ ನಿರ್ಮಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿತ್ರದುರ್ಗದ ಕೋಟೆಯನ್ನು ಶತ್ರು ಸೈನ್ಯದಿಂದ ಸಂರಕ್ಷಣೆ ಮಾಡುವ ಮೂಲಕ ಧೈರ್ಯ, ಶೌರ್ಯ ಮೆರೆದ ಒನಕೆ ಓಬವ್ವಳ ಗುಣಗಳು ಮಕ್ಕಳಲ್ಲಿ ಬೆಳೆಸುವ ಅಗತ್ಯವಿದೆ ಎಂದರು.
ಶಿಕ್ಷಕಿ ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.