ವಿಜಯಪುರ : ಡಿ -22 ರಂದು ಐತಿಹಾಸಿಕ ವೃಕ್ಷೋಥಾನ್ ಹೆರಿಟೇಜ್
ವಿಜಯಪುರ, ನ. 12: ನಗರದಲ್ಲಿ ಡಿಸೆಂಬರ್ 22 ರಂದು ನಡೆಯುತ್ತಿರುವ ಐತಿಹಾಸಿಕ ವೃಕ್ಷೋಥಾನ್ ಹೆರಿಟೇಜ್ ರನ್-2024ರಲ್ಲಿ ಎಲ್ಲರೂ ಪಾಲ್ಗೋಳ್ಳುವ ಮೂಲಕ ಹಸಿರು ವಿಜಯಪುರಕ್ಕೆ ಕೈ ಜೋಡಿಸೋಣ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಹೇಳಿದ್ದಾರೆ.
ಸೋಮವಾರ ಮುಸ್ಸಂಜೆ ನಡೆದ ಸಂಸ್ಥೆಯ ನಾನಾ ಕಾಲೇಜುಗಳ ಪ್ರಾಚಾರ್ಯರು ಮತ್ತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಹಸಿರು ನಮ್ಮ ಉಸಿರಾಗಬೇಕು. ಇಲ್ಲಿನ ಪ್ರಾಚಿನ ಸ್ಮಾರಕಗಳು ಹೆಚ್ಚೆಚ್ಚು ಪ್ರಚಾರವಾಗಬೇಕು. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಇದರಿಂದ ಪರಿಸರ ಸಮೃದ್ಧಿಯಾಗಿ ಸಾರ್ವಜನಿಕರು ಸದೃಢ ಆರೋಗ್ಯ ಹೊಂದಲು ಹಾಗೂ ಜಿಲ್ಲೆಯ ಜನರ ಆರ್ಥಿಕವಾಗಿ ಸಾಕಷ್ಟು ಅಭಿವೃದ್ಧಿಯಾಗಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ನಮ್ಮ ಸಂಸ್ಥೆಯ ಪ್ರತಿಯೊಂದು ಶಾಲೆ, ಕಾಲೇಜುಗಳ ಎಲ್ಲ ಬೋಧಕ, ಬೋದಕರ ಹೊರತಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಐತಿಹಾಸಿಕ ಓಟದಲ್ಲಿ ಪಾಲ್ಗೊಂಡು ಬಸವನಾಡು ಸರ್ವಾಂಗೀಣವಾಗಿ ಸಮೃದ್ಧಿಯಾಗಲು ಕೊಡುಗೆ ನೀಡೋಣ. ಈ ಮೂಲಕ ಇತರ ಶಾಲೆ, ಕಾಜೇಜುಗಳೂ ಇದರಲ್ಲಿ ಪಾಲ್ಗೋಳ್ಳಲು ಸ್ಪೂರ್ತಿಯಾಗೋಣ. ಈ ಬಾರಿಯ ಓಟಕ್ಕೆ ಮತ್ತಷ್ಟು ಮೆರಗು ತರೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೃಕ್ಷೋಥಾನ್ ಹೆರಿಟೇಜ್ ಕೋರ್ ಕಮಿಟಿ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ, ಸಂಸ್ಥೆಯ ಆಡಳಿತಾಧಿಕಾರಿಗಳಾದ ವಿಲಾಸ ಬಗಲಿ, ಬಿ. ಆರ್. ಪಾಟೀಲ, ಐ. ಎಸ್. ಕಾಳಪ್ಪನವರ, ಕೋರ್ ಕಮಿಟಿಯ ಸಂತೋಷ ಔರಸಂಗ, ಸೋಮಶೇಖರ ಸ್ವಾಮಿ, ವೀಣಾ ದೇಶಪಾಂಡಿ, ಬಿ.ಎಲ್.ಡಿ.ಇ ಸಂಸ್ಥೆಯ ನಾನಾ ಕಾಲೇಜುಗಳ ಪ್ರಾಚಾರ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ವೃಕ್ಷೋಥಾನ್ ಬಿ.ಎಲ್.ಡಿ.ಇ ಸಭೆ :
ವಿಜಯಪುರ ನಗರದಲ್ಲಿ ಡಿಸೆಂಬರ್ 22ರಂದು ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್-2024 ಹಿನ್ನೆಲೆಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿವಿ ರಜಿಸ್ಚ್ರಾರ್ ಡಾ. ಆರ್. ವಿ. ಕುಲಕರ್ಣಿ ಅವರ ಸಂಸ್ಥೆಯ ನಾನಾ ಕಾಲೇಜುಗಳ ಪ್ರಾಚಾರ್ಯರು ಮತ್ತು ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮುರಗೇಶ ಪಟ್ಟಣಶೆಟ್ಟಿ,ವಿಲಾಸ ಬಗಲಿ, ಬಿ. ಆರ್. ಪಾಟೀಲ, ಐ. ಎಸ್. ಕಾಳಪ್ಪನವರ ಉಪಸ್ಥಿತರಿದ್ದರು.