ರಾಜ್ಯೋತ್ಸವ ಮತ್ತು ರಕ್ತದಾನ ಶಿಬಿರ : ಬಿ. ಎಲ್. ಡಿ. ಇ ಡೀಮ್ಡ್
ವಿಜಯಪುರ, ನ. 06: ಜೀವ ರಕ್ಷಣೆಯಲ್ಲಿ ರಕ್ತ ಮಹತ್ವದ್ದಾಗಿದ್ದು, ಆರೋಗ್ಯವಂತ ವ್ಯಕ್ತಿ ಒಂದು ವರ್ಷದಲ್ಲಿ ಮೂರ್ನಾಲ್ಕು ಬಾರಿ ರಕ್ತದಾನ ಮಾಡಬಹುದು ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಹೇಳಿದ್ದಾರೆ.
ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವ್ಯವಹಾರ ಅಧ್ಯಯನ ವಿಭಾಗ ಮತ್ತು ಹಾಗೂ ಸಂಶೋಧನೆ ಕೇಂದ್ರ ಮತ್ತು ಬಿ.ಎಲ್.ಡಿ.ಇ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವದ ಕುರಿತು ಹೆಚ್ಚೆಚ್ಚು ಜಾಗೃತಿ ಮೂಡಿಸಿ ರಕ್ತದಾನಕ್ಕೆ ಪ್ರೇರೆಪಿಸಬೇಕು. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ, ವ್ಯಕ್ತಿಯಲ್ಲಿ ಚೈತನ್ಯ ಉಂಟಾಗುತ್ತದೆ. ಅಲ್ಲದೇ, ರಕ್ತ ಅಗತ್ಯವಿರುವ ಜೀವಗಳನ್ನು ಉಳಿಸಿದ ಪುಣ್ಯ ಬರುತ್ತದೆ. ಬಿ.ಎಲ್.ಡಿ.ಇ ಆಸ್ಪತ್ರೆ. ರಕ್ತ ಭಂಡಾರದ ಮೂಲಕ ಅವಶ್ಯವಿರುವ ರೋಗಿಗಳಿಗೆ ರಕ್ತವನ್ನು ಒದಗಿಸಲಾಗುತ್ತಿದೆ. ವೈದ್ಯಕೀಯ, ನೀರಾವರಿ, ವೃಕ್ಷ ಅಭಿಯಾನದಂಥ ಸಮಾಜಮುಖಿ ಕೆಲಸದ ಮೂಲಕ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಅವರು ಶ್ರೇಷ್ಠ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಸಾಹಿತಿ ಕೆ. ಸುನಂದಾ ಮಾತನಾಡಿ, 50 ವರ್ಷದ ಸಂಭ್ರಮದಲ್ಲಿರುವ ಕರ್ನಾಟಕ ಇಂದು ಸಮೃದ್ಧತೆಯಿಂದ ಕೂಡಿದೆ. ಭಾಷೆ, ಸಾಹಿತ್ಯ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ ಕನ್ನಡ ಶಾಸ್ತ್ರೀಯ ಸ್ಥಾನಮಾನ ಹೊಂದಿರುವುದು ಹೆಮ್ಮೆಯ ವಿಷಯ. ನಾವು ಎಲ್ಲಿಯೇ ವಾಸಿಸಲಿ, ಯಾವುದೇ ಉದ್ಯೋಗ ಮಾಡಲಿ ಪ್ರತಿನಿತ್ಯ ಕನ್ನಡ ಬಳಸಬೇಕು. ಕನ್ನಡದ ಬಗ್ಗೆ ಆತ್ಮಾಭಿಮಾನ ಇಟ್ಟುಕೊಳ್ಳಬೇಕು. ಆಂಗ್ಲ ಭಾಷೆಗೆ ಮರುಳಾಗದೇ ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಬೇಕು. ಕನ್ನಡವೇ ನಮ್ಮ ಬದುಕು, ಕನ್ನಡವೇ ನಮ್ಮ ಉಸಿರಾಗಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಬಿ. ಎಸ್. ಬೆಳಗಲಿ ಮಾತನಾಡಿ, ನಾವು ಎಷ್ಟೇ ವಿದ್ಯಾವಂತರಾದರೂ ನಮ್ಮ ಭಾವನೆಗಳು ಹೊರಹೊಮ್ಮುವುದು ಮಾತೃಭಾಷೆಯಲ್ಲಿ. 2000 ವರ್ಷಗಳ ಇತಿಹಾಸವಿರುವ ಕನ್ನಡ ಜಗತ್ತಿನ ದೊಡ್ಡ ಭಾಷೆಗಳಲ್ಲಿ ಒಂದಾಗಿದೆ. ಬೇರೆ ಭಾಷೆಗಳನ್ನು ಕಲಿತರೂ ನಮಗೆ ಬದುಕು ನೀಡಿದ ಕನ್ನಡಕ್ಕೆ ಒತ್ತು ಕೊಡಬೇಕು. ಕನ್ನಡವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕೆಲಸವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ. ಬಿ. ಎ ವಿಭಾಗದ ನಿರ್ದೇಶಕ ಡಾ. ಚಿದಾನಂದ ಬ್ಯಾಹಟ್ಟಿ, ಡಾ. ಅಶ್ವಿನಿ ಯರನಾಳ, ಪ್ರೊ. ಲಕ್ಷಣ ಪವಾರ, ಡಾ. ಮಹಾಂತೇಶ ಕನಮಡಿ, ಪ್ರೊ. ವಿನಯ ಡರ್ಬಿ, ದೇವರಾಜ ಪಾಟೀಲ, ರೇಣುಕಾ ಬಿರಾದಾರ, ಪವಿತ್ರಾ ಜಾದವ, ಪ್ರಶಾಂತ ಪಾಟೀಲ, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಮುರುಗೇಶ ಪಟ್ಟಣಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ಮೋದಿ ಮತ್ತು ಅಲ್ಲಮಪ್ರಭು ನಿರೂಪಿಸಿದರು. ಪ್ರೊ. ಗಂಗಾಧರ ಮಮದಾಪುರ ವಂದಿಸಿದರು.
ಈ ರಕ್ತದಾನ ಶಿಬಿರದಲ್ಲಿ 85 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮತ್ತು ಕಾಲೇಜಿನ ಸಿಬ್ಬಂದಿ ರಕ್ತದಾನ ಮಾಡಿದರು.
ರಕ್ತದಾನ ಶಿಬಿರ : ವಿಜಯಪುರ ನಗರದ ಎ ಎಸ್. ಪಾಟೀಲ ಕಾಮರ್ಸ್ ಕಾಲೇಜಿನಲ್ಲಿ ಬಿ. ಎಲ್. ಡಿ. ಇ ಆಸ್ಪತ್ರೆ ಮತ್ತು ಕಾಲೇಜಿನ ಸಂಯಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮತ್ತು ರಕ್ತದಾನ ಶಿಬಿರವನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಚಿದಾನಂದ ಬ್ಯಾಹಟ್ಟಿ, ಡಾ. ಅಶ್ವಿನಿ ಯರನಾಳ, ಪ್ರೊ. ಲಕ್ಷಣ ಪವಾರ ಡಾ. ಮುರುಗೇಶ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.