ರಾಷ್ಟ್ರೀಯ ಕ್ರೀಡಾ ದಿನ ನೆಮ್ಮದಿಯ ಬದುಕಿಗೆ ಕ್ರೀಡೆ ಅತಿಮುಖ್ಯ: ಸಂತೋಷ ಬಂಡೆ
ಇಂಡಿ: ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಿದಾಗ ಮಾತ್ರ ಮಾನಸಿಕ ಒತ್ತಡ ಕಡಿಮೆಯಾಗಿ ಕಲಿಕೆ ಸುಲಭವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಗೆ ಒತ್ತು ನೀಡಬೇಕು’ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ನಿಮಿತ್ತ ಜರುಗಿದ ‘ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮಹತ್ವ’ ಕುರಿತಾಗಿ ಮಾತನಾಡಿದರು.
‘ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ತಾಳ್ಮೆ, ಸಹನೆ, ಗೆಲುವು ಸಾಧಿಸುವ ಹಂಬಲ ಬೆಳೆಯುತ್ತದೆ. ಸೋತರೆ ಮತ್ತೆ ಗೆಲುವು ಪಡೆಯಬೇಕೆಂಬ ಮನೋಭಾವ ವೃದ್ಧಿಯಾಗುತ್ತದೆ. ಇದರಿಂದ ಮಕ್ಕಳು ಸಮಾಜದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ,ಕ್ರೀಡೆಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ದೈಹಿಕವಾಗಿ ಸಕ್ರಿಯವಾಗಿರಲು ಜನರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ರಾಷ್ಟ್ರೀಯ ಕ್ರೀಡಾ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಕ್ರೀಡೆಗಳ ಸ್ಪರ್ಧಾತ್ಮಕ ಸ್ವಭಾವವು ಆರೋಗ್ಯಕರ ಆತ್ಮವಿಶ್ವಾಸದೊಂದಿಗೆ ಮಕ್ಕಳ ಸ್ವಾಭಿಮಾನ
ಹೆಚ್ಚಿಸುತ್ತದೆ. ಹಾಗಾಗಿ ಶಾಲಾ ಮಕ್ಕಳನ್ನು ಕ್ರೀಡೆಯತ್ತ ಆಕರ್ಷಿತರನ್ನಾಗಿ ಮಾಡುವ ಉದ್ದೇಶ ಈ ದಿನವು ಹೊಂದಿದೆ ಎಂದು ಹೇಳಿದರು.ಶಾಲಾ ಮಕ್ಕಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.