ಇಂಡಿ : ಸೇವಾ ಅವಧಿಯಲ್ಲಿ ಪ್ರಾಮಾಣಿಕತೆ ಹಾಗೂ
ನಿಷ್ಠೆಯಿಂದ ಸಲ್ಲಿಸುವ ಸೇವೆ ಸಮಾಜದಲ್ಲಿ ಗೌರವ
ಹೆಚ್ಚಿಸುವ ಜತೆಗೆ ನೆಮ್ಮದಿ ಜೀವನಕ್ಕೆ
ದಾರಿಯಾಗುತ್ತದೆ. ವಯೋ ನಿವೃತ್ತಿ ಹೊಂದಿದ ತಮ್ಮ ೩೮ ದಿನಗಳ ವೇತನವನ್ನು ತಾಲೂಕಿನ ನೀರಾವರಿ ಯೋಜನೆಗಳಿಗೆ ಸದ್ಬಳಕೆ ಮಾಡಿಕೊಳ್ಳಿ ಎಂದು ₹ ೪೯೬೬೭ ರೂಪಾಯಿ ಚೆಕ್ ನೀಡಿದ್ದು ರಾಜಶೇಖರ ಮೇತ್ರಿ ಅವರ ಸಾಮಾಜಿಕ ಕಳಕಳಿಯನ್ನು ತೋರುತ್ತದೆ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ಅವರು ಭಾನುವಾರ ಪಟ್ಟಣದ ಬಸವರಾಜೇಂದ್ರ
ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ರೇಷ್ಮೆ ಇಲಾಖೆ ನೌಕರರ ಸಂಘ ಹಾಗೂ ಹಟಗಾರ (ನೇಕಾರ) ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ರೇಷ್ಮೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ರಾಜಶೇಖರ ಮೇತ್ರಿ ಅವರ ವಯೋನಿವೃತ್ತಿ ಸನ್ಮಾನ
ಸಮಾರಂಭದಲ್ಲಿ ಮಾತನಾಡಿದರು. ಮೇತ್ರಿ ಅವರು ಸರಳತೆ ಹಾಗೂ ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದರು.
ಮಾತಿಗಿಂತ ಕೃತಿ ಲೇಸು ಎನ್ನುವ ಸಿದ್ದಾಂತದ ಮೇಲೆ
ನಂಬಿಕೆ ಇಟ್ಟವರು. ರೈತರಿಗೆ ಒಳ್ಳೆಯ ಸಂದೇಶ
ನೀಡುವ ಮುಖಾಂತರ ಶ್ರಮಿಸಿದ್ದಾರೆ ಹಾಗೂ ಅವರ
ವಿಶ್ರಾಂತ ಜೀವನ ಸುಖಕರವಾಗಿರಲಿ, ಅವರ ಮಹತ್ವಾಕಾಂಕ್ಷೆ ಈಡೇರಲಿ ಎಂದು ಶುಭ
ಹಾರೈಸುವೆ ಎಂದು ತಿಳಿಸಿದರು.
ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ,
ಸೇವೆಯಿಂದ ನಿವೃತ್ತಿ ಹೊಂದಿದ ಮೇತ್ರಿ ಅವರು
ರೇಷ್ಮೆ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ,
ಒಂದು ಕಪ್ಪು ಚುಕ್ಕೆಯೂ ಬರದೆ ಇಲಾಖೆಯಲ್ಲಿ ಮಾಡಿದ್ದು ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ತೋರಿಸುತ್ತದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಶೇಖರ ಮೇತ್ರಿ, ಮೇಲಾಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಇಲಾಖೆಯಿಂದ ಸಾವಿರಾರು ಜನ ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟ ತೃಪ್ತಿ ನನಗಿದೆ ಎಂದ ಅವರು ಇಡೀ ತಾಲೂಕು ನೀರಾವರಿಗೆ ಒಳಪಡಲಿ ಆಗ ರೈತರಿಗೆ ಅನುಕೂಲವಾಗುತ್ತದೆ. ಇಂಡಿಯನ್ನುಹಸಿರು ನಾಡಾಗಿ ನೋಡುವ ಭಾಗ್ಯ ನಮಗೆ
ಸಿಗಬೇಕೆಂಬ ಆಶಯ ವ್ಯಕ್ತಪಡಿಸಿ ತಮ್ಮ ೩೮ ದಿನದ
ವೇತನವನ್ನು ಚೆಕ್ ಮೂಲಕ ನೀಡಿ ನೀರಾವರಿ
ಯೋಜನೆಗೆ ಬಳಸಿಕೊಳ್ಳಲು ಶಾಸಕ
ಯಶವಂತ್ರಾಯಗೌಡರಿಗೆ ಮನವಿ ಮಾಡಿದರು.
ಅಧ್ಯಕ್ಷತೆವಹಿಸಿದ್ದ ಸುರೇಶ ಶೇಡಶ್ಯಾಳ, ಬಿ.ಎಂ.
ಕೋರೆ, ಹೆಚ್.ಆರ್. ಸಾಹುಕಾರ, ಬಿ.ಎಸ್. ಹಿಪ್ಪರಗಿ, ಡಾ. ಸಂಗಮೇಶ ಮೇತ್ರಿ ಮಾತನಾಡಿದರು. ಸಾನಿಧ್ಯವಹಿಸಿದ್ದ ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಸಿದ್ದಾರೂಢ ಮಠದ ಡಾ. ಸ್ವರೂಪಾನಂದ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಸಿದ್ದರಾಜು ಎಸ್, ಬಿ.ವೈ. ಬಿರಾದಾರ, ಎ.ಬಿ. ಅಂಕದ್, ಸಾಹೇಬಗೌಡ ಬಿರಾದಾರ, ವಿಜಯಕುಮಾರ ಹತ್ತಿ, ಎಸ್.ಡಿ. ಪಾಟೀಲ, ಎಸ್.ಆರ್. ಪಾಟೀಲ, ಬಿ.ಕೆ. ಗೋಟ್ಯಾಳ, ಸುಭಾಸ ಪ್ಯಾಟಿ, ಬಸವರಾಜ ಗೊರನಾಳ, ಆರ್.ಹುಂಡೇಕರ್ ಸೇರಿದಂತೆ
ಮತ್ತಿತರರು ಇದ್ದರು.