ಮುದ್ದೇಬಿಹಾಳ :ತಾಲೂಕಿನ ನಾಲತವಾಡ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, 11 ಜನ ಬಡ ಮುಸ್ಲಿಂ ಹಿರಿಯರಿಗೆ 11 ತಿಂಗಳ ಮಾಶಾಸನ ಪ್ರತಿ ತಿಂಗಳು ₹400 ಅಂತೆ ಒಟ್ಟಾರೆ ₹4,400 ನೀಡಲಾಯಿತು. ಜೊತೆಗೆ, ಜಾಮೀಯಾ ಮಸೀದಿಯ 3 ಮೌಲಾನಾ ಮತ್ತು 3 ಮೌಜಾನ್‌ಗಳಿಗೆ ಪ್ರತಿ ತಿಂಗಳು ₹500 ಅಂತೆ ಒಬ್ಬರಿಗೆ ₹5,500 ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಯೂಬ್ ಮನಿಯಾರ,
“ಬಡವರ ಸೇವೆಯಿಂದ ಸಿಗುವ ತೃಪ್ತಿ ಅಪ್ರತಿಮ. ನೀವು ಮಾಡುವ ದಾನ ಹಾಗೂ ಸಹಾಯವನ್ನು ದೇವರು ಬೇರೆ ರೂಪದಲ್ಲಿ ನಿಮಗೆ ತಲುಪಿಸುತ್ತಾನೆ. ದುಡಿದ ಹಣದಲ್ಲಿ ಒಂದು ಭಾಗವನ್ನು ಬಡವರ ಸೇವೆಗೆ ಮೀಸಲಿಡಬೇಕು. ನಾನು ಮಾಡುತ್ತಿರುವ ಸೇವೆ ನನ್ನ ಅಗಲಿದ ತಂದೆ-ತಾಯಿಗಳ ಸ್ಮರಣಾರ್ಥ, ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂಬುದಕ್ಕಾಗಿ. ನನ್ನ ಸಹೋದರನ ಮಕ್ಕಳು ಕೂಡಾ ಈ ಕಾರ್ಯದಲ್ಲಿ ಸಾಥ್ ನೀಡುತ್ತಿದ್ದಾರೆ,” ಎಂದರು
“ಮುಂದಿನ ವರ್ಷದಿಂದ ಕೇವಲ ಮುಸ್ಲಿಂ ಧರ್ಮದ ತಾಯಂದಿರಿಗೆ ಮಾತ್ರವಲ್ಲ, ಹಿಂದೂ ತಾಯಂದರಿಗೂ ಸಹ ಮಾಶಾಸನ ನೀಡುವ ಯೋಜನೆ ಮಾಡಲಾಗಿದೆ. 11 ತಿಂಗಳ ಹಿಂದೆ ನಾನು ನೀಡಿದ್ದ ವಾಗ್ದಾನವನ್ನು ಈಗ ಪೂರೈಸಿದ್ದೇನೆ. ಇದು ದೊಡ್ಡ ಮೊತ್ತದ ಸಹಾಯವಲ್ಲ, ಆದರೆ ನಿಮ್ಮ ಮಗ ನಿಮ್ಮ ಆಸ್ಪತ್ರೆ ಖರ್ಚಿಗೆ ಅಥವಾ ಮಾಸಿಕ ವೆಚ್ಚಕ್ಕೆ ಕೊಡುಗೆಯಾಗಿ ನೀಡಿದ್ದಾನೆ ಎಂದು ಭಾವಿಸಿ,” ಎಂದು ಅವರು ಹೇಳಿದರು.
ಮೌಲಾನಾ ಇಸ್ಮಾಯಿಲ್ ಮುಲ್ಲಾ, ಮೌಲಾಸಾಬ ರಕ್ಕಸಗಿ, ಅಲ್ಲಾಭಕ್ಷ ಖಾಜಿ, ಅಬ್ದುಲ್ ಗಣಿ ಖಾಜಿ ಅವರು ಮಾತನಾಡಿ,
“ಶ್ರೀಮಂತಿಕೆ ಎಲ್ಲರಲ್ಲೂ ಇದೆ, ಆದರೆ ದಾನ ಮಾಡುವ ಮನಸ್ಥಿತಿ ಇರುವವರು ಬಹಳ ಕಡಿಮೆ. ಅಯೂಬ್ ಮನಿಯಾರ ಅವರು ಕಳೆದ ಹಲವಾರು ವರ್ಷಗಳಿಂದ ಬಡವರ ಪರವಾಗಿ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಮಗ ಆಪ್ತಾಬ್ ಮನಿಯಾರ ಸಹ ತಂದೆಯ ಮಾರ್ಗದಲ್ಲಿ ಸೇವಾ ಕಾರ್ಯಗಳನ್ನು ಮುಂದುವರಿಸುತ್ತಿದ್ದಾರೆ. ಇವರ ಸೇವಾ ಕಾರ್ಯ ಮಾದರಿಯಾಗಿದೆ,” ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಯುವ ಉದ್ಯಮಿ ಆಪ್ತಾಬ್ ಮನಿಯಾರ, ಬಾಬಾ ಎಕೀನ್ (ಬಾಂಬೆ), ಐ.ಎಲ್. ಮಮದಾಪೂರ, ರಿಯಾಜ್ ಮನಿಯಾರ, ಫಯಾಜ್ ಮನಿಯಾರ, ಮೌಲಾನಾ ಮಹ್ಮದಗೌಸ್ ಫಕರುದ್ದಿನ್, ಅಬ್ದುಲ್ ರಜಾಕ್ ನಾಯ್ಕೋಡಿ, ದಸ್ತಗೀರಸಾಬ ಆರೆಶಂಕರ, ಸಯದ್ ಬೆನ್ನೂರ, ಅಮಿನಸಾಬ ಹಳ್ಳೂರ, ಖಾಜಾ ಹುಸೇನ್ ಕತಬಿ, ಅಲ್ಲಾಭಕ್ಷ ಕುಳಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.