ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತರಿಂದ ಪ್ರತಿಭಟನೆ..!
ಹನೂರು: ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ದೊಡ್ಡಿಂದುವಾಡಿ ಸುತ್ತಮುತ್ತಲ ಗ್ರಾಮದ ರೈತರು ದೊಡ್ಡಿಂದುವಾಡಿ ಚೆಸ್ಕಾಂ ಕಚೇರಿ ಎದುರು ಅಧಿಕಾರಿಗಳ ವಿರುದ್ಧ ಇಂದು ಪ್ರತಿಭಟನೆ ನಡೆಸಿದರು.
ಇಂದು ಬೆಳಿಗ್ಗೆಯಿಂದಲೆ ಕಚೇರಿ ಎದುರು ಜಮಾಯಿಸಿದ ರೈತರು ದೇಶಕ್ಕೆ ಅನ್ನ ನೀಡುವ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ವಿದ್ಯುತ್ ಸರಬರಾಜು ಇಲ್ಲದೆ ಬೆಳೆಗಳು ಒಣಗುತ್ತಿವೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ವಿದ್ಯುತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕುವ ವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಇಂಜಿನಿಯರ್ ಲಿಂಗರಾಜು ರವರು ಮಾತನಾಡಿ ಈ ಭಾಗಕ್ಕೆ 10000 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ. ಆದರೆ ನಮಗೆ ಸರಬರಾಜಾಗುತ್ತಿರುವುದು ಕೇವಲ 5000 ಮೆಗಾವ್ಯಾಟ್ ಮಾತ್ರ. ಹನೂರು, ಕೊಳ್ಳೇಗಾಲ, ಚಾಮರಾಜನಗರ ಭಾಗದ ರೈತರು ಎದುರಿಸುವ ಸಮಸ್ಯೆಯನ್ನು ಇಡೀ ರಾಜ್ಯವೇ ಎದುರಿಸುತ್ತಿದೆ. ಕಾರಣ ಮಳೆ ಇಲ್ಲದೆ ಜಲಾಶಯಗಳು ಖಾಲಿಯಾಗಿವೆ. ಈ ಸಮಯದಲ್ಲಿ ಜಲ ವಿದ್ಯುತ್ ಶಕ್ತಿ ಉತ್ಪಾದನೆ ಕಡಿಮೆಯಾಗಿರುವುದರಿಂದ ರಾಜ್ಯದ ವಿದ್ಯುತ್ ಸಮಸ್ಯೆಯಾಗಿದೆ. ರೈತ ಭಾಂದವರು ನೀಡುವ ತಮ್ಮ ಮನವಿಯನ್ನು ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ನಾಳೆ ಇಲಾಖೆಯ ಮೇಲಾಧಿಕಾರಿಗಳನ್ನು ಬರಮಾಡಿಕೊಂಡು ನಿಮಗೆ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ದೊಡ್ಡಿಂದುವಾಡಿ ಮತ್ತು ಸುತ್ತಮುತ್ತಲ ಗ್ರಾಮಗಳ ರೈತರು ಭಾಗಿಯಾಗಿದ್ದರು.