ರಾಯಚೂರು: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಖಾಸಗೀಕರಣ ಮಾಡುವ ಪ್ರಕ್ರಿಯೆ ಆರಂಭಿಸಿರುವ ಕೇಂದ್ರ ಸರ್ಕಾರವು ತನ್ನಪಾಲಿನ ಷೇರು ಬಂಡವಾಳ ಮಾರಾಟ ಮಾಡುತ್ತಿರುವುದನ್ನು ಕೈಬಿಡಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಮಾ ನೌಕರರ ಸಂಘ ರಾಯಚೂರು ವಿಭಾಗದ ನೌಕರರು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಶಹೀದ್ ಭಗತ್ ಸಿಂಗ್ ವೃತ್ತ ಬಹಿರಂಗ ಸಭೆ ಆಯೋಜಿಸಲಾಗಿತ್ತು. ಚಿಂತಕ ವೀರಹನುಮಾನ ಅವರು ಎಲ್.ಐ.ಸಿ ಷೇರು ಮಾರಾಟ (ಐಪಿಓ) ವಿರೋಧಿಸಿ: ದೇಶದ ಆರ್ಥಿಕ ಸ್ವಾಯತ್ತತೆ ಉಳಿಸಿ’ ಕರಪತ್ರವನ್ನು ಬಿಡುಗಡೆಗೊಳಿಸಿದರು. ಆನಂತರ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಎಲ್‌ಐಸಿ ಪಾತ್ರ ಪ್ರಮುಖವಾಗಿದೆ. ಅಂತಹ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದರು.
ಎಲ್.ಐ.ಸಿ ದೇಶದ 40 ಕೋಟಿ ಪಾಲಿಸಿದಾರರ ಸ್ವತ್ತಾಗಿದ್ದು ವಿಶ್ವದ ಅಗ್ರಮಾನ್ಯ ವಿಮಾ ಸಂಸ್ಥೆ ಎಂದು ಹೆಸರಾಗಿದೆ. ಶೇ 99.8ರಷ್ಟು ದಾವೆಗಳನ್ನು ಇತ್ಯರ್ಥಗೊಳಿಸುತ್ತಿರುವ ವಿಶ್ವದ ಪ್ರಮುಖ ವಿಮಾ ಸಂಸ್ಥೆಯಾಗಿದೆ. ಎಲ್.ಐ.ಸಿಯ ಸೇವೆಯು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಲಾಭದಾಯಕ ಮತ್ತು ವಿಶ್ವಾಸಾರ್ಹ ಸಂಸ್ಥೆಯನ್ನು ಕೇಂದ್ರ ಸರ್ಕಾರವು ಖಾಸಗೀಕರಣ ಮಾಡುವುದನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.
ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರವಿಯವರು ಮಾತನಾಡಿ, ಎಲ್‌ಐಸಿ ಇದುವರೆಗೂ ಸುಮಾರು ₹32 ಲಕ್ಷ ಕೋಟಿ ಹಣವನ್ನು ದೇಶದ ಅಭಿವೃದ್ಧಿ ಯೋಜನೆಗಾಗಿ ಪಂಚವಾರ್ಷಿಕ ಯೋಜನೆಗಳ ಮೂಲಕ ತೊಡಗಿಸಿದೆ. ಜನರ ಉಳಿತಾಯವನ್ನು ಸಂಗ್ರಹಿಸಿ ಜನರ ಅಭಿವೃದ್ಧಿಗಾಗಿ ವಿನಿಯೋಗಿಸುತ್ತಿರುವ ಅತ್ಯಂತ ದೊಡ್ಡ ಹಣಕಾಸು ಸಂಸ್ಥೆಯಾಗಿದೆ. ಎಲ್.ಐ.ಸಿಯನ್ನು ಖಾಸಗಿಕರಣ ಮಾಡುವುದರಿಂದ ದೇಶದ ಅಭಿವೃದ್ಧಿಗೆ ತೀವ್ರ ಹಾನಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಮಾ ನೌಕರರ ಸಂಘದ ಉಪಾಧ್ಯಕ್ಷ ವೀರೇಶ ಮಾತನಾಡಿದರು. ಸಂಘದ ಮುಖಂಡರಾದ ಡಿ.ಬಿ.ಕಟ್ಟಿಮನಿ, ಡಿ.ಶರಣಬಸವ ಸಿ.ಐ.ಟಿ.ಯು ಮುಖಂಡರು ಇದ್ದರು.
ರಾಘವೇಂದ್ರ ವಿ.ಎಚ್ ಸ್ವಾಗತಿಸಿದರು. ಎ.ಶ್ರೀಧರ್ ವಂದಿಸಿದರು. ಹುಲಿಗೆಪ್ಪ ಹಾಗು ಸಂಗಡಿಗರು ಕ್ರಾಂತಿಗೀತೆ ಪ್ರಸ್ತುತಪಡಿಸಿದರು