ಇಂಡಿ : ಪ್ರಾಚೀನ ಟಗರುಗಳನ್ನು ಕಾಪಾಡಬೇಕು ತಲೆ ತಲಾಂತರವಾಗಿ ಬಂದು ಈ ಶ್ರೇಷ್ಠವಾದ ತಳಿಗಳನ್ನು ರಕ್ಷಣೆ ಮಾಡಬೇಕು. ಕೇವಲ ಏಳು ದಿನದ ಟಗರು ಮರಿ ೨ ಲಕ್ಷ ರೂಪಾಯಿಗೆ ಮಾರಾಟವಾಗಿದ್ದು ತುಂಬಾ ಆಶ್ಚರ್ಯಕರ ಸಂಗತಿ.
ಹೌದು ಶ್ವಾನಗಳಲ್ಲಿ ಭಾಗಲಕೋಟಿಯ ಮುದೋಳ ಹೌಂಡ್ ಜಾತಿಯ ಶ್ವಾನ, ಪಂಜಾಬ ಗ್ರೇ ಹೌಂಡ್ ಹೇಗೆ ಪ್ರಸಿದ್ಧವಾಗಿವೆಯೋ ಉಣ್ಣೆ ಕುರಿಗಳ ಜಾತಿಯಲ್ಲಿ ಈ ದೇಶಿ ತಳಿಯ ಟಗರು ಪ್ರಸಿದ್ಧವಾಗಿದೆ ಎಂದು ಪಟ್ಟಣದ ಟಗರು ಸಾಕಾಣಿಕೆದಾರ ಬಾನಪ್ಪ ಮಾಸ್ತರ ಪೂಜಾರಿ ಹೇಳಿದರು. ಇವರ ಸಾಕಿದ್ದ ಏಳು ದಿನದ ಮರಿ ಟಗರು ಸುಲ್ತಾನ ಸುಮಾರು ಎರಡು ಲಕ್ಷಕ್ಕೆ ಮಾರಾಟವಾಗಿ ಎಲ್ಲರನ್ನೂ ಚಕಿತಗೊಳಿಸಿದೆ. ಈ ಟಗರು ಮರಿ ತುಂಬಾ ವಿಶೇಷತೆಯನ್ನು ಹೊಂದಿದೆ. ಮರಿ ಟಗರು ಹುಟ್ಟಿ ಇನ್ನೂ ಏಳು ದಿನ ಕಳೆಯುವದೊರಳಗಾಗಿ ಕರ್ನಾಟಕ ಮಹಾರಾಷ್ಟ್ರದ ಕುರಿಗಾರರಿಂದ ಬಹು ಬೇಡಿಕೆ ಬಂದಿದ್ದು, ಇದನ್ನು ಮಹಾರಾಷ್ಟ್ರದ ಸಿದ್ದನಾಥ ಗ್ರಾಮದ ನಾಮದೇವ ಖೊಖರೆ ಎಂಬ ಕುರಿ ಸಾಕಾಣಿಕೆದಾರ ಎರಡು ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ಈ ಸುಲ್ತಾನ ಟಗರು ಮರಿ ಮಾಲೀಕ ಬಾನಪ್ಪ ಪೂಜಾರಿ ಈ ಕುರಿತು ಮಾತನಾಡಿ ಈ ಟಗರು ಸಂತತಿ ಅಪರೂಪವಾಗಿದ್ದು ಇದು ಪರಿಶುದ್ಧವಾದ ದೇಶಿ ಜವಾರಿ ತಳಿಯಾಗಿದ್ದು ಸಂಪೂರ್ಣವಾಗಿ ಮುಖದಲ್ಲಿ ಕುಡಿಗಿಲಾಕಾರ ಗಿಳಿ ಕೊಕ್ಕನ್ನು ಪ್ರತಿಶತ ನೂರಕ್ಕೆ ನೂರು ಹೊಂದಿದ್ದಾಗಿದೆ. ಮಾರಾಟದ ಸಮಯದಲ್ಲಿ ಖರೀದಿದಾರರು ಇದರ ಮೈ ಬಣ್ಣ, ಗಿಳಿ ಮೂಗು, ತಳಿ ಪರೀಶೀಲನೆ ಮಾಡಿ ತೆಗೆದುಕೊಳ್ಳುವರು.ಅಮೂಲ್ಯವಾದ ಪಶು ಪಕ್ಷಿ ಪ್ರಾಣಿಗಳ ಕುರಿತು ಜನರಲ್ಲಿ ಜಾಗೃತೆ ಮೂಡಿಸಲು ಇವುಗಳ ಪ್ರದರ್ಶನ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.