ಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್ ಜಟಾಪಟಿ ಮಧ್ಯೆ ಮೇಕೆದಾಟು ಪಾದಯಾತ್ರೆ ನಿನ್ನೆಯಿಂದ ಆರಂಭಗೊಂಡಿದೆ.
ಮೇಕೆದಾಟು ಕಾಮಗಾರಿ ನಿರ್ಮಿಸಲು ಕಾಂಗ್ರೆಸ್ ಈಗಾಗಲೇ ರಣಕಹಳೆಯನ್ನು ಮೊಳಗಿಸಿದೆ. ಇಂದು ದೊಡ್ಡ ಆಲನಹಳ್ಳಿಯಿಂದ ಕನಕಪುರದ ವರೆಗೆ 16 ಕಿ.ಮೀ. ಪಾದಯಾತ್ರೆಯನ್ನು ಕೈ ಮುಖಂಡರು ಹಾಗೂ ಕಾರ್ಯಕರ್ತರು ಕಾಲ್ನಡಿಗೆ ಮಾಡಲಿದ್ದಾರೆ. ಇಂದು ಮಧ್ಯಾಹ್ನ ಮಾದಪ್ಪನ ದೊಡ್ಡಿಯಲ್ಲಿ ಕಾರ್ಯಕರ್ತರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು
ಪಾದಯಾತ್ರಿಗಳಿಗೆ ಕನಕಪುರದಲ್ಲಿ ವಾಸ್ತವ್ಯಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಇಂದಿನ ಪಾದಯಾತ್ರೆಯಲ್ಲಿ 4-5 ಸಾವಿರ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ. ನಿನ್ನೆ ಸುಸ್ತಿನಿಂದ ಪಾದಯಾತ್ರೆ ಮೊಟಕುಗೊಳಿಸಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ ಇಂದು ಭಾಗಿಯಾಗುವ ಸಾಧ್ಯತೆಯಿದೆ.