ವಿಶ್ವ ವಿಕಲಚೇತನರ ದಿನಾಚರಣೆ-2024
ಆತ್ಮವಿಶ್ವಾಸದಿಂದ ಮುನ್ನಡೆದು ಸಾಧನೆಗೈಯ್ಯುವಂತೆ: ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಕರೆ
ವಿಜಯಪುರ, ಡಿಸೆಂಬರ್ 03 : ಜೀವನದಲ್ಲಿ ಸಾಧನೆ ಮಾಡಲು ಮನಸ್ಸು ಮುಖ್ಯ, ಮನಸ್ಸಿದ್ದಲ್ಲಿ ಮಾರ್ಗ ಎಂಬಂತೆ ವಿಶೇಷ ಚೇತನರು ಒಂದು ವಿಶೇಷ ಸದೃಢ ಮನಸ್ಸು ಹೊಂದಿರುತ್ತಾರೆ. ಸಾಧನೆಗೆ ಯಾವುದೂ ಅಡ್ಡಿಯಾಗಲಾರದು. ಆತ್ಮವಿಶ್ವಾಸದಿಂದ ಎಂತಹ ಸನ್ನಿವೇಶ-ಸಂದರ್ಭವನ್ನು ಛಲದಿಂದ ಎದುರಿಸಿ ಸಾಧನೆಗೆ ಮುಂದಾಗುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಸಾಧನೆ ಸಾಧಕನ ಸೊತ್ತು. ದೃಢ ಮನಸ್ಸು ಹೊಂದಿ, ಸಾಧಕರಾಗಿ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು ಎಂದು ಅವರು ಹೇಳಿದರು.
ಜೀವನದಲ್ಲಿ ಆಶಾಭಾವನೆ ಹೊಂದಿರಬೇಕು. ಸದಾ ಪ್ರಯತ್ನವಾದಿಯಾಗಿರಬೇಕು. ಸತತ ಪ್ರಯತ್ನ ಯಶಸ್ವಿಗೆ ಸಹಕಾರಿಯಾಗಿದೆ. ಜೀವನದಲ್ಲಿ ಸಾಧನೆ ಮಾಡಲು ಮಾನಸಿಕ ದೃಢತೆ ಹೊಂದಬೇಕು. ಮಾನಸಿಕವಾಗಿ ಸದೃಢತೆಯಿಂದ ಸಾಧನೆಯ ಶಿಖರವನ್ನೇರಬಹುದಾಗಿದೆ ಎಂದು ಅವರು ಹೇಳಿದರು.
ವಿಶೇಷ ಚೇತನರು ಎಲ್ಲ ಕ್ಷೇತ್ರಗಳಲ್ಲಿದ್ದಾರೆ. ನಮ್ಮಲ್ಲಿನ ಕೊರತೆಗಳ ಬಗ್ಗೆ ಯೋಚಿಸದೇ ಆತ್ಮವಿಶ್ವಾಸದಿಂದ ಮುನ್ನಡೆದರೆ ಎಲ್ಲವೂ ಸಾಧ್ಯವಾಗುತ್ತದೆ. ತಮ್ಮ ಪ್ರತಿಭೆಗಳಿಂದ ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಸಾಧನೆಗೈಯ್ಯುವಂತೆ ಅವರು ಸಲಹೆ ನೀಡಿದರು.
ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರ ಜೀವನ ಸ್ಪೂರ್ತಿಯಾಗಿಟ್ಟುಕೊಂಡು ಸಾಧನೆಗೆ ಮುಂದಾಗಬೇಕು. ವಿಶೇಷಚೇತನರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲಾಡಳಿತವೂ ಸಹ ಸದಾ ವಿಶೇಷ ಚೇತನರ ಕುಂದು ಕೊರತೆಗಳಿಗೆ ಸ್ಪಂದಿಸುತ್ತದೆ. ಶಿಸ್ತುಬದ್ಧ ಜೀವನ ನಡೆಸುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ ಅವರು ಮಾತನಾಡಿ, ವಿಶೇಷ ಚೇತನರಿಗಾಗಿಯೇ ಇರುವ ಸರ್ಕಾರದ ಸೌಲಭ್ಯಗಳನ್ನು-
ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಸವಿತಾ ಕಾಳೆ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ವಿಶ್ವಸಂಸ್ಥೆಯ ನಿರ್ದೇಶನದಂತೆ ಪ್ರತಿವರ್ಷ ಡಿಸೆಂಬರ್-3 ರಂದು ವಿಶ್ವ ವಿಕಲಚೇತನರ ದಿನಾಚರಣೆ ಆಚರಿಸಲಾಗುತ್ತಿದೆ. 1998 ರಿಂದ ಸುಮಾರು 23 ವರ್ಷಗಳಿಂದ ಆಚರಿಸಲಾಗುತ್ತಿದ್ದು, ಈ ವರ್ಷ ವಿಶ್ವ ಸಂಸ್ಥೆಯು ವಿಕಲಚೇತನರಿಗಾಗಿ ಘೋಷವಾಕ್ಯ “ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವ ಉತ್ತೇಜನ ಎಂದು ಘೋಷಿಸಲಾಗಿದೆ. ವಿಕಲಚೇತನರ ಸಮಗ್ರ ಶ್ರೇಯೋಭಿವೃದ್ದಿಗಾಗಿ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 45,353 ಜನ ವಿಕಲಚೇತನರಿದ್ದು, ಈ ಪೈಕಿ 33,251 ಜನರಿಗೆ ಯುಡಿಐಡಿ ಕಾರ್ಡಗಳನ್ನು ವಿತರಿಸಲಾಗಿದೆ. ಯುಡಿಐಡಿ ಕಾರ್ಡ ಪಡೆದ ಎಲ್ಲ ವಿಕಲಚೇತನರಿಗೆ ವಿವಿಧ ಸಾಧನ-ಸಲಕರಣೆಗಳು, ವಿದ್ಯಾರ್ಥಿವೇತನ, ಇಂಧನ ಚಾಲಿತ ತ್ರಿಚಕ್ರ ವಾಹನ, ಲ್ಯಾಪ್‍ಟಾಪ್, ಬ್ರೈಲ್‍ಕಿಟ್ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಹೊಲಿಗೆಯಂತ್ರ ಸೇರಿದಂತೆ ಇನ್ನಿತರ ಸಾಧನ ಸಲಕರಣೆಗಳನ್ನು ಒದಗಿಸಲಾಗುತ್ತಿದೆ. ವಿಕಲಚೇತನರಿಗೆ ಸರ್ಕಾರದ ಸೌಲಭ್ಯಗಳನ್ನು ಮನೆಬಾಗಿಲಿಗೆ ತಲುಪಿಸಲು ಸರ್ಕಾರ, ಜಿಲ್ಲಾಡಳಿತ, ಸ್ವಯಂ ಸೇವಾ ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ರಾಜೇಶ ಪವಾರ, ಬಂದೇನವಾಜ ಕಲ್ಲೂರ, ಮೋದಿನ ಪಾಶ, ಅಶೋಕ ವಾಲಿಕಾರ, ಶಶಿಕಲಾ ಸೋನಾರ, ಸುಮೀತ ಪಾಂಡಿಚೇರಿ, ಸಂಜೀವ ಭವನಸಿಂಗ್ ಹಜೇರಿ, ಅಂಬಣ್ಣಾ ಗುನ್ನಾಪುರ ರಶ್ಮಿ ಚಿತ್ತವಾಡಗಿ, ಮೌಲಾಲಿಕ ಮಂಟೂರ ಅವರನ್ನು ಸನ್ಮಾನಿಸಲಾಯಿತು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿಎಆರ್ ಡಿವೈಎಸ್‍ಪಿ ಡಿ.ವೈ.ಧನಗರ, ವಾರ್ತಾಧಿಕಾರಿ ಅಮರೇಶ ದೊಡಮನಿ, ನಿಮಿಷ ಆಚಾರ್ಯ, ವಿನೋದ ಖೇಡ, ರಶ್ಮಿ ಚಿತ್ತವಾಡಗಿ, ಉಪಾಧ್ಯಾಯ, ಫಾದರ್ ಟಿಯೋಲ್ ಮಚಾದೋ ಸೇರಿದಂತೆ ಜಿಲ್ಲೆಯ ಎಲ್ಲ ಎಂಆರ್‍ಡಬ್ಲೂ, ವಿಆರ್‍ಡಬ್ಲೂ, ಯುಆರ್‍ಡಬ್ಲೂ ಒಕ್ಕೂಟ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸ್ವಯಂ ಸೇವಾ ಸಂಸ್ಥೆಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದವರೆಗೆ ನಡೆದ ಇಂಧನ ಚಾಲಿತ ತ್ರಿ-ಚಕ್ರ ವಾಹನ ಜಾಥಾ ಜರುಗಿತು.