ಗ್ರಾಮೀಣ ಪ್ರದೇಶದಲ್ಲಿ ಈ ಹಿಂದಿನ ಜನಪದ ಶೈಲಿಯ ಹಾಡುಗಳನ್ನು ಮನೆ ಮನೆಗೆ ಹೋಗಿ ತಲುಪಿಸುವ ಕಾರ್ಯ ಮಾಡಬೇಕು.
ಜಾನಪದ ಕಲೆ ಮತ್ತು ಸಾಹಿತ್ಯವನ್ನು ಮನೆಮನೆಗೂ ತಲುಪಿಸುವ ಹೊಣೆಗಾರಿಕೆಯನ್ನು ಮಹಿಳೆಯರು ಪರಿಣಾಮಕಾರಿಯಾಗಿ ನಿಭಾಯಿಸಬೇಕಿದೆ.
ವರದಿ: ಬಸವರಾಜ ಕುಂಬಾರ ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಇಂದಿನ ದಿನಮಾನಗಳಲ್ಲಿ ಜಾನಪದ ಸಂಸ್ಕೃತಿಯ ಉಳಿವು ಹಾಗೂ ವಿಸ್ತಾರದಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕವಾಗಿದ್ದು, ಜಾನಪದ ಕಲೆ ಮತ್ತು ಸಾಹಿತ್ಯವನ್ನು ಮನೆಮನೆಗೂ ತಲುಪಿಸುವ ಹೊಣೆಗಾರಿಕೆಯನ್ನು ಮಹಿಳೆಯರು ಪರಿಣಾಮಕಾರಿಯಾಗಿ ನಿಭಾಯಿಸಬೇಕಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.
ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್‌ನಲ್ಲಿ ಮಂಗಳವಾರ ನಡೆದ ಕನ್ನಡ ಜಾನಪದ ಪರಿಷತ್, ಬೆಂಗಳೂರು ಇದರ ಮುದ್ದೇಬಿಹಾಳ ತಾಲ್ಲೂಕಾ ಮಹಿಳಾ ಘಟಕದ ಉದ್ಘಾಟನೆ, ಪದಾಧಿಕಾರಿಗಳಿಗೆ ಪದಪತ್ರ ಪ್ರದಾನ ಹಾಗೂ ಜಾನಪದ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಈ ಹಿಂದಿನ ಜನಪದ ಶೈಲಿಯ ಹಾಡುಗಳನ್ನು ಮನೆ ಮನೆಗೆ ಹೋಗಿ ತಲುಪಿಸುವ ಕಾರ್ಯ ಮಾಡಬೇಕು, ಈ ಭಾಗದಲ್ಲಿ ಜನಪದ ಮಹಿಳಾ ಸಮ್ಮೇಳನ ಮಾಡಬೇಕು ಎಂದರು.
ನಂತರ ಕಾಂಗ್ರೇಸ್ ಮುಖಂಡರು, ಅಸ್ಕಿ ಪೌಂಡೇಶನ್ ಅಧ್ಯಕ್ಷರಾದ ಸಿ ಬಿ ಅಸ್ಕಿ ಮಾತನಾಡಿ ನಮ್ಮ ಪೂರ್ವಜರಿಂದ ಬಂದ ಜನಪದವನ್ನು ನಾವುಗಳು ಉಳಿಸಿಕೊಂಡ ಹೋಗಬೇಕಾಗಿದೆ, ಇಂದು ಉತ್ತರ ಕರ್ನಾಟಕದ ಹೆಸರೇಳಿಕೊಂಡು ಅಶ್ಲೀಲ ಜಾನಪದ ಹಾಡುಗಳನ್ನು ಹಾಡುವದು ತಡೆಯಲು ವೇದಿಕೆಗಳು ನಿರ್ಮಾಣವಾಗುತ್ತಿರುವದು ಒಳ್ಳೆಯ ಕಾರ್ಯ, ಜನಪದಗೋಸ್ಕರ ಮಹಿಳಾ ಸಮ್ಮೇಳನ ಮಾಡಿದರೆ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು.
ಕಾಂಗ್ರೇಸ್ ಮಹಿಳಾ ಮುಖಂಡರಾದ ಸಂಗೀತಾ ನಾಡಗೌಡ ಮಾತನಾಡಿ ಇಂದಿನ ಯುವ ಜಾನಪದ ಹೆಸರಿನಲ್ಲಿ ಅಶ್ಲೀಲತೆಯ ಕಡೆಗೆ ಯುವ ಸಮೂಹ ಜಾರುತ್ತಿರುವುದು ದುರಂತದ ಸಂಗತಿ, ಅಶ್ಲೀಲ ಹಾಡುಗಳನ್ನು ಹಾಡುವ ಗಾಯಕರನ್ನು ಕರೆಸಿ ವೈಭವಿಕರಿಸುತ್ತಿರುವ ಸಮಾಜದ ವಿರುದ್ದ ಹರಿಹಾಯ್ದ ಅವರು ಭೂತಾಯಿಗೆ ಹೆಣ್ಣು ಎಂದು ಸಂಭೋಧಿಸುವ ಜನರು ಆ ಹೆಣ್ಣಿನ ಹೆಸರಿನಲ್ಲಿ ಅಶ್ಲೀಲತೆಯ ಹಾಡುಗಳನ್ನು ಸಾಹಿತ್ಯ ಮಾಡಿ ಹಾಡುವರ ಮನೆಯಲ್ಲಿ ಹೆಣ್ಣು ಮಕ್ಕಳು ಇರುವದಿಲ್ಲವೇ ? ಎಂದು ಪ್ರಶ್ನೆ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಿಜಯಪುರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ದ್ರಾಕ್ಷಾಯಣಿ ಬಿರಾದಾರ ವಹಿಸಿ ಮಾತನಾಡಿ, ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯಿಂದ ಜಾನಪದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಹೊಸ ಚೈತನ್ಯ ಸಿಗಲಿದೆ ಎಂದರು.
ಬಾಗಲಕೋಟ ಜಿಲ್ಲಾ ಅಧ್ಯಕ್ಷ ಡಿ.ಎಂ. ಸಾವಕಾರ ಅವರು ತಾಲ್ಲೂಕಾ ಮಹಿಳಾ ಘಟಕದ ವಿವಿಧ ಪದಾಧಿಕಾರಿಗಳಿಗೆ ಪದಪತ್ರಗಳನ್ನು ಪ್ರದಾನ ಮಾಡಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ವಿಜಯಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುಂಡಲೀಕ ಯ. ಮುರಾಳ ನೀಡಿದರು.
ಮುಖ್ಯ ಅತಿಥಿಗಳಾಗಿ ಸಂಗೀತಾ ನಾಡಗೌಡ, ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು.ತಾಲ್ಲೂಕಾ ಜಾನಪದ ಪರಿಷತ್ ಅಧ್ಯಕ್ಷ ಎ.ಆರ್. ಮುಲ್ಲಾ ಸೇರಿದಂತೆ ಹಲವರು ಭಾಗವಹಿಸಿ ಜಾನಪದ ಚಟುವಟಿಕೆಗಳಿಗೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ರೀಮತಿ ದೀಪರತ್ನಶ್ರೀ ಆಲೂರ ಸೇರಿದಂತೆ ಗೌರವ ಅಧ್ಯಕ್ಷರು, ಸಂಚಾಲಕರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ ಸೇರಿದಂತೆ ವಿವಿಧ ಪದಾಧಿಕಾರಿಗಳಿಗೆ ಪದಪತ್ರಗಳನ್ನು ಪ್ರದಾನ ಮಾಡಲಾಯಿತು. ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಜಾನಪದ ಕಲಾವಿದರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


















