ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ಕರ್ಯಾಗಾರ
ವಿಜಯಪುರ: ಮಹಿಳೆಯರ ಸ್ವಾವಲಂಬನೆ ಮತ್ತು ಉದ್ಯಮಾಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮ ಕೇಂದ್ರಗಳ ಸಹಕಾರ ಅಗತ್ಯವಿದೆ ಎಂದು ಮುದ್ದೇಬಿಹಾಳದ ಎಂ.ಜಿ.ವಿ.ಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಎನ್. ಪೋಲೇಶಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗ ಹಾಗೂ ಮುದ್ದೇಬಿಹಾಳದ ಸರ್ಕಾರಿ ಪ್ರಥಮ ದರ್ಜೆ ವಸತಿ ಎಸ್ಸಿ/ಎಸ್ಟಿ ಮಾದರಿ ಕಾಲೇಜು ಹಾದಲಗೆರಿ, ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಪಿಎಂ-ಉಷಾ ಮತ್ತು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಪರಿಷತ್ತಿನ ಅಡಿಯಲ್ಲಿ ಮಂಗಳವಾರ ಮುದ್ದೇಬಿಹಾಳದಲ್ಲಿ ಹಮ್ಮಿಕೊಂಡಿದ್ದ “ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ವಿಷಯದ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುಗದಲ್ಲಿ ಮಹಿಳೆಯರು ಸ್ವತಂತ್ರವಾಗಿ ತಾವು ಆಯ್ಕೆ ಮಾಡಿದ ಕ್ಷೇತ್ರಗಳಲ್ಲಿ ಮುನ್ನಡೆಯಲು ಶಿಕ್ಷಣ ಮತ್ತು ಉದ್ಯಮ ತರಬೇತಿಯು ಅತ್ಯಂತ ಮಹತ್ವದ್ದಾಗಿವೆ. ಮಹಿಳೆಯರು ಸ್ಥಳೀಯ ಸಂಪನ್ಮೂಲಗಳನ್ನು ಗುರುತಿಸಿ, ಸಣ್ಣ ಮಟ್ಟದ ಕೈಗಾರಿಕೆಗಳು ಹಾಗೂ ಸ್ವಯಂ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಬೇಕು. ಅಷ್ಟೇ ಅಲ್ಲದೇ ಸರ್ಕಾರದ ವಿವಿಧ ಉದ್ಯಮಾಭಿವೃದ್ಧಿ ಕೇಂದ್ರಗಳು, ಬ್ಯಾಂಕುಗಳು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ಸಹಕಾರದಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧ್ಯವೆಂದು ಹೇಳಿದರು.
ಮೊದಲನೇ ಅಧಿವೇಶನದಲ್ಲಿ ಹುನಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ, ಭಾಗ್ಯವತಿ ಎಚ್.ಆರ್ “ಮಹಿಳೆಯರು ಸ್ವಂತ ವ್ಯವಹಾರ ಆರಂಭಿಸುವಲ್ಲಿ ಎದುರಿಸುತ್ತಿರುವ ಪ್ರಮುಖ ಸವಾಲುಗಳು” ವಿಷಯದ ಕುರಿತು ಮಾತನಾಡಿ, ಹಣಕಾಸಿನ ಕೊರತೆ, ಸಾಮಾಜಿಕ ನಿರ್ಬಂಧಗಳು, ಕುಟುಂಬದ ಬೆಂಬಲದ ಅಭಾವ, ಹಾಗೂ ಸರಿಯಾದ ಮಾರ್ಗದರ್ಶನದ ಕೊರತೆಯ ಬಗ್ಗೆ ವಿವರಿಸಿ, ಮಹಿಳೆಯರು ಆತ್ಮವಿಶ್ವಾಸದಿಂದ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು, ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿ ಸ್ವಾವಲಂಬಿ ಆಗಬೇಕು ಎಂದು ಸಲಹೆ ನೀಡಿದರು. ಇದೆ ಸಂದರ್ಭದಲ್ಲಿ, ಮಹಿಳೆಯರಿಗಾಗಿ ಸರ್ಕಾರ ನೀಡುತ್ತಿರುವ ವಿವಿಧ ಯೋಜನೆಗಳು ಮತ್ತು ತರಬೇತಿ ಕಾರ್ಯಕ್ರಮಗಳ ಮಾಹಿತಿಯನ್ನು ವಿದ್ಯಾರ್ಥಿನಿಯರಿಗೆ ತಿಳಿಸಿ, ಮಹಿಳೆಯರು ತಮ್ಮ ಕನಸನ್ನು ನನಸಾಗಿಸಲು ಶಿಕ್ಷಣ ಮತ್ತು ತಾಂತ್ರಿಕ ಜ್ಞಾನವನ್ನು ಶಸ್ತçವಾಗಿಸಿಕೊಳ್ಳಬೇಕು ಎಂದು ಹೇಳಿದರು.ಎರಡನೇ ಅಧಿವೇಶನದಲ್ಲಿ ವಿಜಯಪುರದ ಸಿ.ಇ.ಡಿ.ಒ.ಕೆ, ಜಂಟಿ ನಿರ್ದೇಶಕಿ ಸುಪ್ರಿತಾ ಬಿ. ಬಳ್ಳಾರಿ, “ಭಾರತದಲ್ಲಿ ಮಹಿಳಾ ಉದ್ಯಮದ ವಿಕಾಸ ಮತ್ತು ಅವಕಾಶಗಳು” ಎಂಬ ವಿಷಯದ ಕುರಿತು ಮಾತನಾಡಿ, ಮಹಿಳೆಯರು ತಾಂತ್ರಿಕ ಜ್ಞಾನ ಮತ್ತು ಆತ್ಮವಿಶ್ವಾಸದಿಂದ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುಂದುವರಿಯಬೇಕು. ನೈಕಾ ಸಂಸ್ಥಾಪಕಿ ಫಲ್ಗುಣಿ ನಾಯರ್, ಬಯೋಕಾನ್ನ ಕಿರಣ್ ಮಜುಂದಾರ್ ಶಾ ಹಾಗೂ ಶಹ್ನಾಜ್ ಹುಸೇನ್ ಅವರಂತಹ ಯಶಸ್ವಿ ಮಹಿಳಾ ಉದ್ಯಮಿಗಳ ಉದಾಹರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿನಿಯರನ್ನು ಪ್ರೇರೇಪಿಸಿದರು.
ಮೂರನೇ ಅಧಿವೇಶನದಲ್ಲಿ ವಿಜಯಪುರದ ಬಿ.ಐ.ಆರ್.ಡಿ.ಎಸ್. ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಅಗಸಿಮುಂದಿನ್, “ಮಹಿಳಾ ಉದ್ಯಮಿಗಳಿಗೆ ಸರ್ಕಾರ ನೀಡುತ್ತಿರುವ ವಿವಿಧ ಹಣಕಾಸು ಸಹಾಯ ಯೋಜನೆ”ಗಳ ಕುರಿತು ಮಾತನಾಡಿ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಉದ್ಯೋಗಿನಿ ಯೋಜನೆ, ಮಹಿಳಾ ಉದ್ಯಾಮ ನಿಧಿ, ಅನ್ನಪೂರ್ಣ ಯೋಜನೆ, ಸ್ತಿçà ಶಕ್ತಿ ಪ್ಯಾಕೇಜ್ ಹಾಗೂ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳ ಪ್ರಮುಖ ಅಂಶಗಳನ್ನು ವಿವರಿಸಿ, ವಿದ್ಯಾರ್ಥಿನಿಯರು ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಾಗಾರದ ಸಂಯೋಜಕಿ ಪ್ರೊ ಅನಿತಾ ಆರ್ ನಾಟಿಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಾದಲಗೇರಿಯ ಜಿ.ಎಫ್.ಜಿ.ಸಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅನಿಲ್ ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು, ಮತ್ತಿತ್ತರಿದ್ದರು.



















