ಮುದ್ದೇಬಿಹಾಳ : ಮರದಲ್ಲಿದ್ದ ಹುಣಸೆ ಹಣ್ಣು ಕೀಳುವಾಗ ಆಯತಪ್ಪಿ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಢವಳಗಿಯಲ್ಲಿ ನಡೆದಿದೆ. ಮೃತಳನ್ನು ಯಾದಗಿರಿ ಜಿಲ್ಲೆ ಹುಣಚಗಿ ತಾಲೂಕು ಗೆದ್ದಲಮರಿ ಗ್ರಾಮದ ಪರಮವ್ವ ಮಲ್ಲಪ್ಪ ಕುರಿ (24) ಎಂದು ಗುರ್ತಿಸಲಾಗಿದೆ. ಢವಳಗಿ ಭಾಗದ ಹೊಲಗಳಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದು, ಹುಣಸೆ ಮರ ಕಂಡು ಅದರಲ್ಲಿ ಬೆಳೆದಿದ್ದ ಹುಣಸೆ ಹಣ್ಣು ಕಿತ್ತಿಕೊಳ್ಳಲು ಪರಮವ್ವ ಮುಂದಾಗಿದ್ದಾಳೆ. ಟ್ರ್ಯಾಲಿಯಲ್ಲಿ ಉರುವಲು ಕಟ್ಟಿಗೆ ಮುಂತಾದ ಸಾಮಗ್ರಿ ತುಂಬಿದ್ದರಿಂದ ಆಕೆಗೆ ಹಣ್ಣು ಕೀಲುವುದು ಸುಲಭವಾಗಿತ್ತು. ಮರದ ಟೊಂಗೆಯಲ್ಲಿದ್ದ ಹುಣಸೆ ಹಣ್ಣನ್ನು ಕೈಯಲ್ಲಿ ಹಿಡಿದು ಕಿತ್ತಬೇಕೆನ್ನುವಷ್ಟರಲ್ಲಿ ವಾಹನ ಮುಂದಕ್ಕೆ ಚಲಿಸಿದ್ದು, ಏಕಾಏಕಿ ಆಯತಪ್ಪಿ ನೆಲಕ್ಕೆ ಬಿದ್ದಾಗ ಹಿಂದಿನ ಟ್ರ್ಯಾಲಿಯ ಚಕ್ರದ ಕೆಳಗೆ ಸಿಕ್ಕು ಸ್ಥಳದಲ್ಲೇ ಅಸುನೀಗಿದ್ದಾಳೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.