ಡಿಸೆಂಬರ್ 22 ರಂದು ನಗರದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- ಕಾರ್ಯಕ್ರಮ
ವಿಜಯಪುರ, ಆ. 27: ಡಿಸೆಂಬರ್ 22 ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024 ಕಾರ್ಯಕ್ರಮವನ್ನು ಕಳೆದ ಬಾರಿಗಿಂತಲೂ ಅತ್ಯುತ್ತಮವಾಗಿ ಆಯೋಜಿಸಲು ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಾ. ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.
ಇಂದು ಮಂಗಳವಾರ ಸಂಜೆ ನಗರದಲ್ಲಿ ನಡೆದ ಸಿದ್ಧತೆಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಈ ಸಭೆಯಲ್ಲಿ ಪಾಲ್ಗೊಂಡ ಕೋರ್ ಕಮಿಟಿ ಸದಸ್ಯರು ಈವರೆಗೆ ಕೈಗೊಳ್ಳಲಾದ ಸಿದ್ಧತೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿ ಇನ್ನಷ್ಟು ಉತ್ತಮವಾಗಿ ಓಟವನ್ನು ಆಯೋಜಿಸಲಾಗುತ್ತಿದೆ.
ವಿಜಯಪುರ ನಗರದ ಐತಿಹಾಸಿಕ ತಾಣಗಳಾದ ಗೋಳಗುಮ್ಮಟ, ಸುಂದರೇಶ್ವರ ದೇವಸ್ಥಾನ, ಆನಂದ ಮಹಲ, ಚರ್ಚ್, ನರಸಿಂಹ ದೇವಸ್ಥಾನ, ಬಾರಾಕಮಾನ, ಇಬ್ರಾಹಿಂ ರೋಜಾ, ಸೈನಿಕ್ ಶಾಲೆ, 770 ಅಮರಗಣಾಧೀಶ್ವರರ ಲಿಂಗ ಸ್ಮಾರಕ, ಜ್ಞಾನಯೋಗಾಶ್ರಮ, ಶತಮಾನದ ಶಿವಯೋಗಿ ಸಿದ್ದರಾಮೇಶ್ವರ ದೇವಸ್ಥಾನಗಳ ಮುಂಬಾಗದಲ್ಲಿ ಓಟ ಸಾಗಲಿದ್ದು, ಈ ತಾಣಗಳ ಮಹತ್ವದ ಕುರಿತು ಈಗಿನಿಂದಲೇ ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರಾಯೋಜಕರು ಪ್ರಾಯೋಜಕತ್ವ ನೀಡಲು ಉತ್ಸುಕರಾಗಿದ್ದಾರೆ. ಅಲ್ಲದೇ, ಈ ಬಾರಿ ಹೆರಿಟೇಜ್ ರನ್ ಕೋರ್ ಕಮಿಟಿಯ ಪ್ರತಿಯೊಂದು ಸಮಿತಿಗಳು ಈಗಾಗಲೇ ಕಾರ್ಯಕ್ರಮದ ಯಶಸ್ಸಿಗೆ ಯೋಜನೆಗಳನ್ನು ರೂಪಿಸಿವೆ. ಕಳೆದ ಬಾರಿ 10 ಸಾವಿರ ಓಟಗಾರರು ಭಾಗವಹಿಸಿದ್ದರು. ಈ ಬಾರಿ 15 ಸಾವಿರ ಓಟಗಾರರು ಪಾಲ್ಗೊಳ್ಳಲು ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಬೇರೆ ಊರುಗಳಿಂದ ಬರುವ ಓಟಗಾರರಿಗೆ ವಿಜಯಪುರ ಐತಿಹಾಸಿಕ ತಾಣಗಳ ಪರಿಚಯ ಮಾಡುವುದರ ಜೊತೆಗೆ ಅವರ ವಾಸ್ತವ್ಯಕ್ಕೆ ರಿಯಾಯಿತಿ ದರದಲ್ಲಿ ಹೊಟೇಲ್‍ಗಳನ್ನು ಗುರ್ತಿಸಲಾಗುತ್ತಿದೆ. ಕಳೆದ ಬಾರಿ ಹೈಡ್ರೇಶನ್ ಪಾಯಿಂಟ್‍ಗಳಲ್ಲಿ ಆಕರ್ಷಕ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಕಲಾ ತಂಡಗಳ ಪ್ರದರ್ಶನ ಏರ್ಪಡಿಸಲು ಆಸಕ್ತ ಸಂಘಗಳನ್ನು ವಿನಂತಿಸಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೆ ನೂರಾರು ಓಟಗಾರರು ಆನ್‍ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿದ್ದು, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ, ಸಾಮಾಜಿಕ ಜಾಲತಾಣಗಳ ಮೂಲಕವೂ ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ. ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್‍ಗಳನ್ನು ಅಳವಡಿಸಲಾಗುತ್ತಿದೆ ಎಂದು ನೋಂದಣಿ ಸಮಿತಿಯ ಸದಸ್ಯರು ಸಭೆಗೆ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರಾದ ಡಾ. ಮುರುಗೇಶ ಪಟ್ಟಣಶೆಟ್ಟಿ, ಶಿವನಗೌಡ ಪಾಟೀಲ, ಸಂತೋಷ ಔರಸಂಗ, ಗುರುಶಾಂತ ಕಾಪಸೆ, ಅಪ್ಪು ಭೈರಗೊಂಡ, ಅಮಿತ ಬಿರಾದಾರ, ಪ್ರದೀಪ ಕುಂಬಾರ, ನವೀದ ನಾಗಠಾಣ, ಸಮೀರ ಬಳಗಾರ, ಶಿವಾನಂದ ಯರನಾಳ, ಸಚಿನ ಪಾಟೀಲ, ಪ್ರವೀಣ ಚೌರ, ಡಿ. ಕೆ. ತಾವಸೆ, ಜಗದೀಶ ಪಾಟೀಲ, ರೀಟಾ ಕನಮಡಿ, ನವೀದ್ ನಾಗಠಾಣ, ವೀಣಾ ದೇಶಪಾಂಡೆ, ಮಹೇಶ ವಿ. ಶಟಗಾರ, ಸಂದೀಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವಿಜಯಪುರ ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024 ಸಿದ್ಧತೆಗಳ ಕುರಿತು ಪರಿಶೀಲನೆ ಸಭೆ ಡಾ. ಮಹಾಂತೇಶ ಬಿರಾದಾರ ನೇತೃತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಪಾಲ್ಗೊಂಡ ನಾನಾ ಕೋರ್ ಕಮಿಟಿ ಸದಸ್ಯರು ಪಾಲ್ಗೊಂಡರು.