ಲಿಂಗಸೂಗೂರು: ಗಣರಾಜ್ಯೋತ್ಸವದ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಗೊಳಿಸಿದ ರಾಯಚೂರು ನ್ಯಾಯಾಧೀಶರ ವಿರುದ್ಧ ತಾಲೂಕಿನ ಮುದಗಲ್ ಪಟ್ಟಣದಲ್ಲಿ 20 ಕ್ಕೂ ಹೆಚ್ಚು ಸಂಘಟನೆಗಳು ಇಂದು ಮುದಗಲ್ ಬಂದ್ಗೆ ಕರೆ ನೀಡಿದ್ದವು. ಬಂದ್ ಕರೆ ಹಿನ್ನಲೆ ಪಟ್ಟಣದಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಅಂಗಡಿ-ಮುಗ್ಗಟ್ಟುಗಳು ಬಂದ್ ಆಗಿದ್ದವು.
ಇನ್ನು 500 ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು ವಿವಿಧ ಬೀದಿ ಬೀದಿಗಳಲ್ಲಿ ನ್ಯಾಯಾಧೀಶರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ಮೆರವಣಿಗೆ ನಡೆಸಿದರು. ಈ ವೇಳೆ ಮುದಗಲ್ ಕರವೇ ಘಟಕದ ಅಧ್ಯಕ್ಷ ಎಸ್.ಎ.ನಯಿಮ್ ಮಾತನಾಡಿ ರಾಯಚೂರ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ. ಅಂಬೇಡ್ಕರ್ ಅವರು ವಿಶ್ವದ ಪಂಡಿತರಾಗಿ, ದಲಿತರ ಸೂರ್ಯನಾಗಿ, ನಿಮ್ನ ವರ್ಗಕ್ಕೆ ಕತ್ತಲೆಯಿಂದ ಬೆಳಕಿನಡೆಗೆ ದಾರಿ ತೋರಿಸಿದ ಮಹಾನ್ ಚೇತನ. ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಗಾಗಿ ಹೋರಾಡಿದ ವಿಶ್ವ ಕಂಡ ಮಹಾನಾಯಕರಿಗೆ ಅಗೌರವ ತೋರಿದ್ದಾರೆ. ನ್ಯಾಯಾಧೀಶರ ನಡೆಗೆ ಎಲ್ಲಾ ಸಂಘಟನೆಗಳು ಖಂಡನೆ ವ್ಯಕ್ತಪಡಿಸುತ್ತವೆ ಎಂದರು.