ವಿವೇಕಾನಂದರ ನವಭಾರತ ನಿರ್ಮಾಣದ ಚಿಂತನೆಗಳು
ಇಂದಿನ ಪೀಳಿಗೆಗೆ ಮಾರ್ಗದರ್ಶಿ-ಸಂತೋಷ ಬಂಡೆ
ವಿವೇಕಾನಂದರ ಧೈರ್ಯ, ಪ್ರಾಮಾಣಿಕತೆ, ದೇಶಭಕ್ತಿ, ಆತ್ಮವಿಶ್ವಾಸ, ಶಿಕ್ಷಣದ ಕಾಳಜಿಯಂತಹ ತತ್ವಾದರ್ಶಗಳು ನಮಗೆಲ್ಲರಿಗೂ ಸ್ಪೂರ್ತಿ. ನವಭಾರತ ನಿರ್ಮಾಣದ ಅವರ ಅದ್ಬುತ ಪ್ರೇರಣಾದಾಯಕ ಚಿಂತನೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಸೋಮವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನದ ನಿಮಿತ್ತ ಹಮ್ಮಿಕೊಂಡ ‘ನವಭಾರತ ನಿರ್ಮಾಣದಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ’ ಕುರಿತು ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವ, ಅಪೂರ್ವ ವಾಗ್ಮೀಯತೆ, ಪ್ರಚೋದನಾತ್ಮಕ ಬರವಣಿಗೆ ಮೂಲಕ ನಮ್ಮ ಯುವಕರಲ್ಲಿ ನವೋತ್ಸಾಹ, ಸಂಸ್ಕೃತಿ ಬಗ್ಗೆ ಹೆಮ್ಮೆ ಮೂಡಿಸಿ,
ನವಭಾರತ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದರು ಎಂದು ಹೇಳಿದರು.
ವಿವೇಕಾನಂದರ ಚಿಂತನೆಗಳು ವ್ಯಕ್ತಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಿ, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಪ್ರೇರೇಪಿಸುತ್ತವೆ. ವಿಶ್ವದ ಎಲ್ಲ ಜನರ ನಡುವಿನ ಸೌಹಾರ್ದತೆ ಮತ್ತು ಏಕತೆ ಇಂದಿನ ಜಗತ್ತಿಗೆ ಅತಿ ಮುಖ್ಯ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ ಆಯ್ ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧ್ಯಾತ್ಮಿಕ ಲೋಕದ ಮಹಾಚೇತನ, ಭವ್ಯ ಭಾರತದ ಹೆಮ್ಮೆಯ ಪುತ್ರ, ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ ಸ್ವಾಮಿ ವಿವೇಕಾನಂದರ ಬದುಕು ಎಲ್ಲರಿಗೂ ಆದರ್ಶವಾಗಿದೆ ಎಂದು ಹೇಳಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಬೇಗಂ ಮುಲ್ಲಾ, ಕಮಲವ್ವ ದಳವಾಯಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು


















